ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ತಾಲ್ಲೂಕಿನ ತಾಡಿಗೋಲ್ ಕ್ಲಾಸ್ನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಥಳಿಸಿರುವ ಪುಂಡ ಪೋಕರಿಗಳ ವಿರುದ್ಧ ಪೊಲೀಡರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಆಗ್ರಹಪಡಿಸಿದರು . ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಈಚೆಗೆ ತಾಲ್ಲೂಕಿನ ತಾಡಿಗೋಳ್ ಗ್ರಾಮದ ಸಮೀಪ ನಡೆದ ಘರ್ಷಣೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರು ಹಾಗೂ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿ ಮಾತನಾಡಿದರು . ಈ ಘಟನೆಯಲ್ಲಿ ಹಲ್ಲೆಗೆ ಒಳಗಾಗಿರುವ ವಿದ್ಯಾರ್ಥಿನಿಯರನ್ನು ಕೇಸ್ನಲ್ಲಿ ಸೇರಿಸಿರುವುದು ದುರದೃಷ್ಟಕರ . ಇದು ಅವರನ್ನು ಹೆದರಿಸಿ , ಮೊಕದ್ದಮೆ ವಾಪಸ್ ಪಡೆಯುವಂತೆ ಮಾಡಲು ಮಾಡಲಾಗಿದೆ . ಪೊಲೀಸರು ಅಮಾಯಕ ಹೆಣ್ಣು ಮಕ್ಕಳನ್ನು ಕೇಸ್ನಲ್ಲಿ ಸೇರಿಸಿ ಮಾನಸಿಕ ಹಿಂಸೆ ನೀಡುವುದು ಸರಿಯಲ್ಲ . ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರಿಗೆ ತೆಲಂಗಾಣ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ . ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಅಂಥ ಧೈರ್ಯ ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು . ವಿಳಾಸ ಗೊತ್ತಿದೆ , ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ದಾಖಲಾಗಿದೆ ಹೀಗಿದ್ದೂ , ಅವರನ್ನು ಹಿಡಿಯದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ . ಆದ್ದರಿಂದ ಎರಡು ದಿನಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು . ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ , ಡಿವೈಎಸ್ಪಿ ಕೆ.ಸಿ.ಗಿರಿ , ತಾಲ್ಲೂಕು ವೈದ್ಯಾಧಿಕಾರಿ ಡಾ . ಎಂ.ಸಿ.ವಿಜಯ , ಆಸ್ಪತ್ರೆ ಆಡಳಿತಾಧಿಕಾರಿ ಡಿ . ಶ್ರೀನಿವಾಸ್ , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್ , ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ , ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶ್ ಇದ್ದರು .