3 ಕೋಟಿ ವೆಚ್ಚದಲ್ಲಿ ಜಿಲ್ಲಾ ನೌಕರರ ಭವನ ನಿರ್ಮಾಣ ಆಗಸ್ಟ್ ಕೊನೆ ವಾರ ಗುದ್ದಲಿ ಪೂಜೆ ನಡೆಸಲು ತೀರ್ಮಾನ-ಸುರೇಶ್‍ಬಾಬು

ಕೋಲಾರ:- ಅಂದಾಜು ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೂರು ಮಹಡಿಗಳ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡದ ಗುದ್ದಲಿ ಪೂಜೆ ಆಗಸ್ಟ್ ಕೊನೆ ವಾರ ಹಮ್ಮಿಕೊಂಡಿರುವುದಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸುತ್ತಿದ್ದಂತೆ ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿತು.
ನಗರದ ರೋಟರಿ ಭವನದಲ್ಲಿ ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಗೆ ಚಾಲನೆ ನೀಡಿ, ಕಳೆದ ತಿಂಗಳು ನಿವೃತ್ತರಾದ ಗ್ರಾ.ಪಂ ಪಿಡಿಒ ನಾಗರಾಜ್, ಜಿಪಂನ ಚೆನ್ನಪ್ಪ, ತೋಟಗಾರಿಕಾ ಇಲಾಖೆಯ ಕದಿರಪ್ಪ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.
ಸುಂದರ ನೌಕರರ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಹಲವಾರು ದಾನಿಗಳು ಮುಂದೆ ಬಂದಿದ್ದಾರೆ ಜತೆಗೆ ಜಿಲ್ಲೆಯ ಅನೇಕ ನೌಕರರು ಆರ್ಥಿಕ ನೆರವು ಒದಗಿಸಲು ಒಪ್ಪಿದ್ದಾರೆ ಎಂದು ಸಭೆಗೆ ತಿಳಿಸಿದ ಸುರೇಶ್‍ಬಾಬು, ನಿವೃತ್ತ ನೌಕರರೂ ಸಹಾ ಕಟ್ಟಡ ಕಾಮಗಾರಿಗೆ 2 ಲಕ್ಷ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸೆ.3ನೇ ವಾರವೇ ಪ್ರತಿಭಾ ಪುರಸ್ಕಾರ


ಜಿಲ್ಲಾ ನೌಕರರ ಸಂಘದಿಂದ ಸೆಪ್ಟೆಂಬರ್ ಮೂರನೇ ವಾರ ನೌಕರರ ಸಾಧಕ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸಂಘದ ವಾರ್ಷಿಕ ಮಹಾಸಭೆ ನಡೆಸಲು ಇದೇ ಸಂದರ್ಭದಲ್ಲಿ ಸಭೆ ಅನುಮೋದನೆ ನೀಡಿತು.
ವಿಧಾನಸಭಾ ಚುನಾವಣೆ ಮತ್ತಿತರ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವನ್ನು ತುಮಕೂರಿನಲ್ಲಿ ನಡೆಸಲು ನಿರ್ಧರಿಸಿದ್ದು, ಕ್ರೀಡಾಕೂಟದ ಉದ್ಘಾಟನೆಗೆ ಮುಖ್ಯಮಂತ್ರಿಗಳು ದಿನಾಂಕ ನಿಗಧಿ ಮಾಡಿದ ಕೂಡಲೇ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡ ತಾಲ್ಲೂಕು ಸಂಘಗಳ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ದಾಖಲೆ,ವಹಿಗಳನ್ನು ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಹಾಲಿ ಖಜಾಂಚಿ ವಿಜಯ್ ಮತ್ತವರ ತಂಡ ಪಡೆದುಕೊಂಡಿದ್ದು ವಾಪಸ್ಸು ನೀಡಿಲ್ಲ ಎಂದು ಆರೋಪಿಸಿದಾಗ ಅಧ್ಯಕ್ಷರು ಉತ್ತರಿಸಿ ಸಂಘಕ್ಕೆ ವರದಿಯನ್ನೂ ನೀಡಿಲ್ಲ ಮತ್ತು ಕಡತಗಳನ್ನು ಹಿಂತಿರುಗಿಸಿಲ್ಲ ಕೂಡಲೇ ಕಡತ ಹಿಂತಿರುಗಿಸಲು ಸಭೆಯಲ್ಲಿ ಇದ್ದ ಅವರಿಗೆ ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್ ಅವರಿಗೆ ಸಂಘದ ಕಡತಗಳೊಂದಿಗೆ ಜವಾಬ್ದಾರಿ ಹಸ್ತಂತರಿಸುವಂತೆ ಚೌಡಪ್ಪ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು. ಸಂಘದ ಕೆಲವು ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು, ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಹಾಲಿ ಖಜಾಂಚಿ ವಿಜಯ್ ಅವರು ಸಂಘದ ಕೆಲಸಗಳ ನಿರ್ವಹಣೆಗೆ ಸ್ಪಂದಿಸದಿರುವ ಕುರಿತು ಸಭೆಯ ಗಮನಕ್ಕೆ ತರಲಾಯಿತು.

ಒಗ್ಗಟ್ಟಾಗಿ ಸಾಗಲು ಕೆಎನ್‍ಎಂ ಮನವಿ


ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಹೋಗಬೇಕಾಗಿದೆ, ಸಂಘಟನೆ ಬಲಗೊಳಿಸುವ ಕೆಲಸ ಆಗಬೇಕು, ಹಿಂದೆ ಚೌಡಪ್ಪ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆಯಲ್ಲಿ ಸ್ಪಂದನೆ ನೀಡದ ಕಾರಣವೇ ಅಜಯ್ ನೇಮಕವಾಗಿದೆ ಹಾಗೆಯೇ ಈಗ ಖಜಾಂಚಿ ವಿಜಯ್ ಸಹಾ ಸಹಕಾರ ನೀಡದಿರುವುದು ನಿಜ ಎಂದರು.
ಸಂಘವನ್ನು ಒಟ್ಟಾಗಿ ಮುನ್ನಡೆಸೋಣ ಎಲ್ಲಾ ಸದಸ್ಯರು ಕೈಜೋಡಿಸಿ ಎಂದ ಅವರು, ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ನೌಕರರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್,ರಾಜ್ಯಪರಿಷತ್ ಸದಸ್ಯ ಗೌತಮ್,ಗೌರವಾಧ್ಯಕ್ಷ ರವಿಚಂದ್ರ,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಖಜಾಂಚಿ ವಿಜಯ್,ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಉಪಾಧ್ಯಕ್ಷರಾದ ಪುರುಷೋತ್ತಮ್,ನಂದೀಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಖಜಾಂಚಿ ಕೃಷ್ಣಮೂರ್ತಿ,ಶ್ರೀನಿವಾಸ್, ಬಂಗಾರಪೇಟೆ ಅಧ್ಯಕ್ಷ ಅಪ್ಪೇಗೌಡ, ಜಿಲ್ಲಾ ಪದಾಧಿಕಾರಿಗಳಾದ ಶಿವಕುಮಾರ್, ಖಜಾನೆ ಶಂಕರ್, ವಿಜಯಮ್ಮ, ಪ್ರೇಮ, ಅನಿಲ್, ರವಿ,ಶ್ರೀರಾಮ್, ಚೌಡಪ್ಪ,ರತ್ನಪ್ಪ, ನಾಗಮಣಿ, ಎನ್.ಎಸ್.ಭಾಗ್ಯ,ಕಲಾವತಿ,ಮಂಜುಳಾ, ಯೂನಿಸ್ ಖಾನ್,ಹರ್ಷಿತ್‍ಗಾಂಧಿ, ಶಿಕ್ಷಕ ಬಳಗದ ವೆಂಕಟಾಚಲಪತಿ,ಚಿಕ್ಕಣ್ಣ,ಸದಾಶಿವರೆಡ್ಡಿ,ಮಲ್ಲಿಕಾರ್ಜುನ್, ಸುಬ್ರಮಣಿ,ಕೋರ್ಟ್‍ನ ನಾಗರಾಜ್,ಮುನಿಸ್ವಾಮಿ, ಬಸವೇಗೌಡ,ನಟರಾಜ್ ಮತ್ತಿತರರಿದ್ದರು.