ಕೋಲಾರ/ 26 ನವೆಂಬರ್ (ಹಿ.ಸ) : ನಮ್ಮ ದೇಶ ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಗಿದ್ದು, ಆ ದಿನವನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ. ಇದು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಒತ್ತಿಹೇಳುತ್ತದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆಗಳನ್ನು ಗುರುತಿಸುವುದಲ್ಲದೆ, ಪ್ರಜಾಸತ್ತಾತ್ಮಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸುವಲ್ಲಿ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಪಾದಿಸುವ ಆಚರಣೆಯಾಗಿದೆ. ಆದ್ದರಿಂದ ಸಂವಿಧಾನ ದಿನವನ್ನು ನಮ್ಮ ದೇಶದ ಉದ್ದಗಲಕ್ಕೂ ಆಚರಿಸಲಾಗುತ್ತದೆ. ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಂವಿಧಾನ ಮತ್ತು ಅದರ ಆಶಯಗಳ ಕುರಿತಾಗಿ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತದೆ. ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ ರವರು ತಿಳಿಸಿದರು.
ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ, ಮೈ ಭಾರತ್-ನೆಹರು ಯುವ ಕೇಂದ್ರ ಕೋಲಾರ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಕೋಲಾರ, ರೋಟರಿ ಕೋಲಾರ್ ಲೈಕ್ ಸೈಡ್ ಇವರ ಸಹಯೋಗದಲ್ಲಿಯಿಂದ ಕೋಲಾರದ ಮಿಲ್ಲತ್ ಕಾಲೇಜಿನಲ್ಲಿ ನವಂಬರ್ 26ನೇ ತಾರೀಖು 10.00 ಗಂಟೆಗೆ ಸಂವಿಧಾನ ದಿನಾಚರಣೆಯಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಮಾತನಾಡಿದರು.
ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಷಮ್ಸ್ ಎಂ.ಬಿ. ಮಾತನಾಡಿ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವೆಂದರೆ ಅದುವೇ ಭಾರತೀಯ ಸಂವಿಧಾನ. 2015ರಿಂದ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ದೇಶದ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನ ದಿನವನ್ನು ಆಚರಿಸುತ್ತಾರೆ. ಈ ವಿಶೇಷ ದಿನದಂದು ಭಾರತೀಯ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಅರಿವು ಮೂಡಿಸಲಾಗುತ್ತದೆ.
ಮುಸ್ತಫ ಪಾμÁ ಎಂಪಿ ಮಾತನಾಡಿ, ಗೆಳೆಯರೇ, ನಮ್ಮ ಸಂವಿಧಾನ ಬಹಳ ವಿಶೇಷವಾದುದು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ನಮ್ಮ ಸಂವಿಧಾನ ಒತ್ತಿ ಹೇಳುತ್ತದೆ. ಕಾಲಕಾಲಕ್ಕೆ ಬದುಕಿನ ಗುಣಮಟ್ಟ ಸುಧಾರಣೆಯಾಗುವಂತೆ, ಹೊಸ ಹೊಸ ವಿಷಯಗಳಿಗೆ ಅನುಗುಣವಾಗಿ ನಮ್ಮ ಸಂವಿಧಾನವೂ ನವೀಕರಿಸಲ್ಪಡುತ್ತ ಸಾಗುತ್ತಿದೆ. ಹಾಗಾಗಿಯೆ, ಅದು ಸದಾ ಜೀವಂತ. ಭಾರತೀಯರಾದ ನಮ್ಮೆಲ್ಲರ ಬದುಕಿನ ಚೌಕಟ್ಟು ಕೂಡ ಹೌದು.
ಮಿಲ್ಲದ್ ಕಾಲೇಜಿನ ಪ್ರಾಂಶುಪಾಲರಾದ ಆಮಿದಾನ ಆಮಿದಾನ ಮತ್ತು ಪರ್ವೀನ್ ಬಾನು ರವರು ಮಾತನಾಡಿ ಸಂವಿಧಾನದ ದಿನವನ್ನು ಸಂವಿಧಾನ್ ದಿವಸ್ ಎಂದೂ ಕರೆಯುತ್ತಾರೆ, ಇದು ದೇಶದ ಸಂವಿಧಾನವನ್ನು ಅಂಗೀಕರಿಸುವುದನ್ನು ಗುರುತಿಸುವುದರಿಂದ ಭಾರತಕ್ಕೆ ಒಂದು ಪ್ರಮುಖ ದಿನವಾಗಿದೆ, ಇದು ದೇಶದ ಸರ್ವೋಚ್ಚ ಕಾನೂನು. ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ ಮತ್ತು ಇದು ಭಾರತೀಯ ಸಂವಿಧಾನದಲ್ಲಿ ವಿವರಿಸಿರುವ ಮೂಲಭೂತ ತತ್ವಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಂರಕ್ಷಿಸುವ ಮಹತ್ವವನ್ನು ನೆನಪಿಸುತ್ತದೆ.
ವಿನಯ್ ಕುಮಾರ್ ಮಂಡಳಿ ಸದಸ್ಯರು ಮಾತನಾಡಿ ಭಾರತದ ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮವನ್ನು ಸಂವಿಧಾನ ದಿನದಂದು ಆಚರಿಸಲಾಗುತ್ತದೆ. ಭಾರತವು ಜಾತಿ, ಮತ, ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನತೆ ಮತ್ತು ನ್ಯಾಯವನ್ನು ಖಾತರಿಪಡಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸಂವಿಧಾನವು ರಾಜ್ಯವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ವೈಯಕ್ತಿಕ ಸ್ವಾತಂತ್ರ್ಯಗಳನ್ನು ರಕ್ಷಿಸುತ್ತದೆ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಮತ್ತಷ್ಟು ಮುನ್ನಡೆಸುತ್ತದೆ.
ಶಬ್ಬೀರ್, ಹೂವಳ್ಳಿ ನಾಗರಾಜ್, ಶ್ಯಾಮಲ, ಶಫೀಕ್, ಖುತೂಬ್, ಶಾಲೆಯ ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದರು.