ಬೆಂಗಳೂರು,:ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರೆಂಟಿ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯುವನಿಧಿ ನೋಂದಣಿ ಪ್ರಕ್ರಿಯೆಗೆ ವಿಧ್ಯುಕ್ತ ಚಾಲನೆ ನೀಡಿದರು. ಜ. 12ಕ್ಕೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವಜನರ ಭವಿಷ್ಯಕ್ಕಾಗಿ ಈ ಯುವನಿಧಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 5 ಗ್ಯಾರೆಂಟಿಗಳನ್ನು ನೀಡುವುದಾಗಿ ಮತದಾರರಿಗೆ ಭರವಸೆ ನೀಡಿತ್ತು. ಈಗಾಗಲೇ 4 ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಇಂದು ಯುವನಿಧಿ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂಬುದನ್ನು ಸಾಬೀತು ಮಾಡಿದೆ. ಯುವಕರಿಗೆ ಉದ್ಯೋಗ ಸಿಗುವತನಕ ಯುವನಿಧಿ ಯೋಜನೆಯಡಿ ಹಣ ದೊರೆಯಲಿದೆ. ಇದಕ್ಕಾಗಿ ನಿರುದ್ಯೋಗಿ ಯುವಕರು ಪ್ರತಿ ತಿಂಗಳ 25ನೇ ತಾರೀಖಿನ ಒಳಗಾಗಿ ತಮ್ಮ ಅರ್ಜಿಯಲ್ಲಿ ನಿಖರ ಮಾಹಿತಿ ನಮೂದಿಸಬೇಕು. ಇದರ ಜತೆಗೆ ಹಣ ಪಡೆಯುವವರ ಕುರಿತು ಸಮಗ್ರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಲಿದೆ.
ಒಂದು ವೇಳೆ ಕೆಲಸ ಸಿಕ್ಕಿದ ಬಳಿಕವೂ ಹಣ ಪಡೆಯುವುದು ಕಂಡು ಬಂದರೆ ಅಂತಹ ವ್ಯಕ್ತಿಗಳಿಂದ ಹಣ ವಾಪಸ್ ಪಡೆಯಲು ಸರ್ಕಾರ ಯೋಜನೆ ರೂಪಿಸಿದೆ. ಯುವ ನಿಧಿ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್, ಬೆಂಗಳೂರು 1 ಹಾಗೂ ಕರ್ನಾಟಕ 1ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಜನವರಿ 12 ರಂದು ವಿವೇಕಾನಂದರ ಜಯಂತಿ ಆಚರಿಸಲಾಗುತ್ತದೆ. ಅದೇ ದಿನ ಅರ್ಹ ನಿರುದ್ಯೋಗಿ ಪದವೀಧದರಿಗೆ 3 ಸಾವಿರ ರೂ. ಹಾಗೂ ಡಿಪ್ಲೊಮೊ ತೇರ್ಗಡೆಯಾದವರಿಗೆ ಮಾಸಿಕ 1500 ರೂ. ಭತ್ಯೆ ನೇರ ನಗದು ವರ್ಗಾವಣೆ (ಡಿಬಿಟಿ)ಮೂಲಕ ಜಮೆ ಮಾಡಲಾಗುತ್ತದೆ.
ಈ ಯೋಜನೆಯ ಲಾಭವನ್ನು 4.18 ಲಕ್ಷ ಪದವೀಧರರು 48.153 ಡಿಪ್ಲೊಮೊ ತೇರ್ಗಡೆಯಾದವರು ಸೇರಿದಂತೆ ಒಟ್ಟು 5.29 ಲಕ್ಷ ಯುವಕರು ನೋಂದಣಿಯಾಗುವ ನಿರೀಕ್ಷೆ ಇದೆ. ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ. ಮುಂದಿನ ಹಣಕಾಸು ವರ್ಷದಲ್ಲಿ 1250ಕೋಟಿ ರೂ. ಅಂದಾಜು ವೆಚ್ಚ ನಿರೀಕ್ಷೆ ಮಾಡಲಾಗಿದೆ.
ಈ ದಾಖಲೆಗಳು ಅಗತ್ಯ
ಪದವೀಧರರು ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣಪತ್ರ ಸಲ್ಲಿಸಬೇಕು. ಡಿಪ್ಲೊಮೊ ಅಭ್ಯರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿ ಅಂಕಪಟ್ಟಿ ಇಲ್ಲವೇ ಡಿಪ್ಲೊಮೊ ಪ್ರಮಾಣಪತ್ರ ಸಲ್ಲಿಸಬೇಕು. ಕರ್ನಾಟಕದ ವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು.
ಷರತ್ತುಗಳು
ಪದವಿ ಅಥವಾ ಡಿಪ್ಲೊಮೊ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ವಾಸವಾಗಿರಬೇಕು ಎಂಬ ಷರತ್ತುಗಳನ್ನು ನಿರುದ್ಯೋಗ ಪದವೀಧರರಿಗೆ ವಿಧಿಸಲಾಗಿದೆ.
ಫಲಾನುಭವಿಗಳು ಪ್ರತಿ ತಿಂಗಳ 25ರೊಳಗೆ ಸ್ವಯಂಘೋಷಣೆ ಮೂಲಕ ನಿರುದ್ಯೋಗ ಭತ್ಯೆ ಪಡೆಯಬಹುದು. ಇದರ ನಡುವೆ ಸ್ವಂತ ಉದ್ಯೋಗ ಆರಂಭಿಸಿದರೆ ಅಥವಾ ಉದ್ಯೋಗ ಸಿಕ್ಕ ನಿರುದ್ಯೋಗಿಗಳಿಗೆ ಯುವನಿಧಿ ಭತ್ಯೆ ದೊರೆಯುವುದಿಲ್ಲ.