ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿಯಾಗುತ್ತಾರೆ- ಸ್ತ್ರೀಶಕ್ರಿ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲದ ಮೊತ್ತ ಹೆಚ್ಚಿಸಲಾಗುವುದು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿಯಾಗುತ್ತಾರೆ. ಆಗ ಸ್ತ್ರೀಶಕ್ರಿ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ನೀಡುವ ಬಡ್ಡಿರಹಿತ ಸಾಲದ ಮೊತ್ತ ಹೆಚ್ಚಿಸಲಾಗುವುದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ 65 ಸ್ತ್ರೀಶಕ್ತಿ ಸಂಘಗಳಿಗೆ ರೂ.3.25 ಕೋಟಿ ಹಾಗೂ 99 ರೈತರಿಗೆ ರೂ.99.65 ಲಕ್ಷ ಬಡ್ಡಿರಹಿತ ಸಾಲ ವಿತರಿಸಿ ಮಾತನಾಡಿದರು.
ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ತಲಾ ಈಗ ನೀಡಲಾಗುತ್ತಿರುವ ರೂ.50 ಸಾವಿರಕ್ಕೆ ಬದಲಾಗಿ ರೂ.1 ಲಕ್ಷ ಹಾಗೂ ರೈತರಿಗೆ ಈಗ ನೀಡಲಾಗುತ್ತಿರುವ ರೂ.3 ಲಕ್ಷಕ್ಕೆ ಬದಲಾಗಿ ರೂ.5 ಲಕ್ಷದ ವರೆಗೆ ಬಡ್ಡಿರಹಿತ ನೀಡುವ ಸಂಕಲ್ಪ ಮಾಡಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸಂಕಲ್ಪ ಕಾರ್ಯರೂಪಕ್ಕೆ ಬರಲಿದೆ. ಆ ಬಗ್ಗೆ ಅನುಮಾನ ಬೇಡ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜಿಎಸ್‍ಟಿ ಮೂಲಕ ಬಡವರ ಜೀವ ಹಿಂಡುತ್ತಿದ್ದಾರೆ. ಕುರಿ ವಿಮೆ ಮಾಡಿಸಲೂ ಜಿಎಸ್‍ಟಿ ಕಟ್ಟಬೇಕಾಗಿ ಬಂದಿದೆ. ಮಕ್ಕಳು ಮರಿ ಇಲ್ಲದ ಪ್ರಧಾನಿಗೆ ಬಡವರು ಮಕ್ಕಳನ್ನು ಸಾಕಬೇಕಾದಾಗ ಪಡುವ ಕಷ್ಟ ಅರ್ಥವಾಗುವುದಿಲ್ಲಎಂದು ಹೇಳಿದರು.
ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ಬ್ಯಾಂಕ್ ಸಾಲ ಪಡೆದು ದೇಶದಿಂದ ಪಲಾಯನ ಮಾಡಿದ್ದಾರೆ. ಆದರೆ ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವುದರ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುದಿಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಗ್ಗಲಗಟ್ಟ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು, ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ಡಿಸಿಸಿ ಬ್ಯಾಖ್ ನಿರ್ದೇಶಕ ವೆಂಕಟರೆಡ್ಡಿ, ಮುಖಂಡರಾದ ಕೊಂಡಸಂದ್ರ ವೆಂಕಟಶಿವಾರೆಡ್ಡಿ, ಲಕ್ಷ್ಮಣ್, ವಿಶ್ವನಾಥರೆಡ್ಡಿ, ಕೃಷ್ಣಮೂರ್ತಿ, ಬೈರೆಡ್ಡಿ, ಗಣೇಶ್ ರೆಡ್ಡಿ, ಸೋಮು, ಕೃಷ್ಣಾರೆಡ್ಡಿ, ಚಿಕ್ಕರೆಡ್ಡಪ್ಪ, ಅಮರನಾರಾಯಣ, ಅಮರನಾಥ್, ಶಂಕರರೆಡ್ಡಿ, ಜಯಣ್ಣ ಇದ್ದರು.