ನೆಲವಂಕಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಲುಮೇಲಮ್ಮ ಆಯ್ಕೆ

ಶ್ರೀನಿವಾಸಪುರ : ತಾಲ್ಲೂಕಿನ ನೆಲವಂಕಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ 2ನೇ ಅವಧಿಗಾಗಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಲುಮೇಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ನೆಲವಂಕಿ ಗ್ರಾ.ಪಂ. ಸೇರಿದಂತೆ ಒಟ್ಟು 18 ಸದಸ್ಯರಿದ್ದು, ಅದರಲ್ಲಿ ಕಾಂಗ್ರೆಸ್ ಬೆಂಬಲಿತ 14, ಜೆಡಿಎಸ್ ಬೆಂಬಲಿತ 4 ಸದಸ್ಯರಿದ್ದು, ಈ ಹಿಂದಿನ ಉಪಾಧ್ಯಕ್ಷರಾಗಿದ್ದ ಮಮತಸೋಮಶೇಖರ್ ರಾಜೀನಾಮೆಯಿಂದ ತೆರವುಗೊಂಡಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಲುಮೇಲಮ್ಮ ಏಕೈಕ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ತಾ.ಪಂ ಮಾಜಿ ಸದಸ್ಯರಾದ ಕೆ.ಕೆ.ಮಂಜು ಮಾತನಾಡಿ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಈ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ಎಲ್ಲಾ ಗ್ರಾಮಗಳಿಗೂ ಪಕ್ಷಬೇದವಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗಿದೆ ಎಂದರು.
ಚುನಾವಣಾ ಪ್ರಕ್ರಿಯೆಯನ್ನು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಎಂ.ಶ್ರೀನಿವಾಸನ್ ನಡೆಸಿಕೊಟ್ಟರು. ಗ್ರಾ.ಪಂ.ಅಧ್ಯಕ್ಷೆ ಗೌತಮಿ ಮುನಿರಾಜು, ಪಿಡಿಒ ಗೌಸ್‍ಸಾಬ್, ಮುಖಂಡರಾದ ಮುನಿರಾಜು, ಬಾಬುರೆಡ್ಡಿ, ಮುನಿಯಪ್ಪ, ಸುದರ್ಶನ್, ಶಂಕರಪ್ಪ, ಎನ್.ರಘುನಾಥರೆಡ್ಡಿ, ರತ್ನಪ್ಪ ಹಾಗು ಗ್ರಾ.ಪಂ.ಸದಸ್ಯರು ಇದ್ದರು.