ಇಲ್ಲಿನ ಪುರಸಭೆ ಕಚೇರಿ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡ ತೆರವುಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಪ್ರತಿಭಟನೆ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಇಲ್ಲಿನ ಪುರಸಭೆ ಕಚೇರಿ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡ ತೆರವುಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಬೆಂಬಲಿತ ಪುರಸಭಾ ಸದಸ್ಯರು ಶನಿವಾರ ಪುರಸಭಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು . ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ , ಪುರಸಭಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಖಾಸಗಿ ವ್ಯಕ್ತಿಗಳಿಂದ ಅಕ್ರಮ ಸಂಭಾವನೆ ಪಡೆದು ಪುರಸಭೆಗೆ ಸೇರಿದ ಜಮೀನಲ್ಲಿ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ . ಪುರಸಭೆಯಲ್ಲಿ ಹಣ ನೀಡದ ಯಾವುದೇ ಕೆಲಸ ಆಗುತ್ತಿಲ್ಲ .. ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂದು ಆಪಾದಿಸಿದರು . ಈ ಸಂದರ್ಭದಲ್ಲಿ ತಹಶೀಲ್ದಾರ್‌ ಎಸ್‌.ಎಂ.ಶೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ , ಪ್ರತಿಭಟನಕಾರರು ಹಾಗೂ ಮುಖ್ಯಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ , ಜಿಲ್ಲಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ , ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡ ತೆರವುಗೊಳಿಸಲು ಅನುಮತಿ ಪಡೆದುಕೊಂಡರು . ತಕ್ಷಣ ಜೆಸಿಬಿ ನೆರವಿನಿಂದ ಕಟ್ಟಡ ಕೆಡವಲಾಯಿತು . ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮವನ್ನು ಸ್ವಾಗತಿಸಿ ಪ್ರತಿಭಟನಕಾರರು ಪಟಾಕಿ ಸಿಡಿಸಿ ಸಂಭ್ರಮಿಸಿದರು . ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ , ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ , ಪೊಲೀಸ್ ಇನ್ಸ್‌ಪೆಕ್ಟರ್ ಸಿ.ರವಿಕುಮಾರ್‌ , ಮುಖಂಡರಾದ ಭಾಸ್ಕರ್ , ನಾಗರಾಜ್ ,ಕೆ. ಅನೀಸ್ ಅಹ್ಮದ್ , ಪೈರೋಜ್ , ಮುರಳಿ , ವೇಣುಗೋಪಾಲ್ , ಹರೀಶ್ ಕುಮಾರ್ , ರಾಜು ಇದ್ದರು .