“ಗರ್ತಿಕೆರೆ ರಾಘಣ್ಣ” ರಿಗೆ ಅಭಿನಂದನೆ – ಗೌರವ


ಕುಂದಾಪುರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಾನು ನೀಡಿದ್ದಲ್ಲದೇ, ನಾಟಕಗಳಲ್ಲೂ ಪಾತ್ರ ಮಾಡಿದ್ದೆ. ಎಚ್. ಎನ್. ನಕ್ಕತ್ತಾಯರ ನಾಟಕದಲ್ಲಿ ಪಾತ್ರ ಮಾಡಿದ್ದು ಸಂಗೀತ ನಿರ್ದೇಶನ ನೀಡಿದ್ದು ಸ್ಮರಣೆಯಲ್ಲಿದೆ. ಕುಂದಾಪುರಕ್ಕೆ ಬಂದಾಗ ವೈಕುಂಠ ಹೆಬ್ಬಾರರ ಆಶ್ರಯ ನನಗೆ ದೊರಕುತ್ತಿತ್ತು. ಅವರೊಬ್ಬ ಕಲಾ ಆರಾಧಕ ಮತ್ತು ಕಲಾ ಪೋಷಕ. ಅವರ ಸಂಸ್ಮರಣೆಯಲ್ಲಿ ನನಗೆ ಐರೋಡಿ ಕುಟುಂಬದ ಗೌರವ ದೊರಕುತ್ತಿರುವುದು ಸಂತೋಷವಾಗಿದೆ ಎಂದು ಹೆಸರಾಂತ ಗಾಯಕ ಗರ್ತಿಕೆರೆ ರಾಘಣ್ಣ ಎಂದೇ ಕರೆಯಲ್ಪಡುವ ಹೊ. ನಾ. ರಾಘವೇಂದ್ರ ರಾವ್ ಹೇಳಿದರು.
ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಐರೋಡಿಯ ಸದಾನಂದ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. 87ರ ಹರೆಯದ ರಾಘಣ್ಣ ವೇದಿಕೆಯಲ್ಲಿ ಹಾಡಿ ಎಲ್ಲರನ್ನು ರಂಜಿಸಿದರು.
ರಂಗ ನಿರ್ದೇಶಕ, ಕುಂದಾಪುರ ಸಂಗೀತ ಭಾರತಿ ಟ್ರಸ್ಟ್‍ನ ನಿಕಟಪೂರ್ವ ಕಾರ್ಯಾಧ್ಯಕ್ಷ ದಿ. ಐರೋಡಿ ವೈಕುಂಠ ಹೆಬ್ಬಾರರ ಸಂಸ್ಮರಣೆ ಹಾಗೂ ಕಲಾ ಕೌಮುದಿ ಗರ್ತಿಕೆರೆ ರಾಘಣ್ಣನವರ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ “ಕುಂದಪ್ರಭ” ಸಂಪಾದಕ ಯು. ಎಸ್. ಶೆಣೈ ವೈಕುಂಠ ಹೆಬ್ಬಾರ್ ಸಾಂಸ್ಕøತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿದರು. ಗರ್ತಿಕೆರೆ ರಾಘಣ್ಣನವರ ಸಾಧನೆ ಕೊಂಡಾಡಿದರು.
ಡಾ. ಎ. ಆದರ್ಶ ಹೆಬ್ಬಾರ್ ಸ್ವಾಗತಿಸಿದರು. ಐರೋಡಿ ನರಸಿಂಹ ಹೆಬ್ಬಾರ್ ಅತಿಥಿಗಳನ್ನು ಗೌರವಿಸಿದರು. ಡಾ. ಅಖಿಲಾ ಹೆಬ್ಬಾರ್ ಅಭಿನಂದನಾ ಪತ್ರ ವಾಚಿಸಿದರು.
ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆಯ ಸಂಚಾಲಕ ಐರೋಡಿ ರಾಜಶೇಖರ ಹೆಬ್ಬಾರ್ ವಂದಿಸಿದರು. ಈ ಹಿರಿಯ ಕಲಾವಿದರ ಭಾಗವಹಿಸುವಿಕೆಯಿಂದ ಯಕ್ಷಗಾನ ತಾಳ ಮದ್ದಳೆ ನಡೆಯಿತು.