ಕೋಲಾರ:- ನಗರದ ಕಿಲಾರಿಪೇಟೆ ಯಾದವ ಸಮಾಜದಿಂದ ಇತ್ತೀಚೆಗೆ ಡಿ.ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಡಾ.ಶಂಕರಪ್ಪ ಹಾಗೂ ರಾಜ್ಯಮಟ್ಟದ ಶ್ರೇಷ್ಟ ವೈದ್ಯಪ್ರಶಸ್ತಿಗೆ ಭಾಜನರಾದ ಮಾಲೂರು ಆರೋಗ್ಯಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪ್ರಸನ್ನಕುಮಾರ್, ಕರ್ತವ್ಯನಿಷ್ಠೆ ಇದ್ದರೆ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ, ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಗುರುತಿಸುವಂತಾಗಿದೆ, ಇದೆಲ್ಲಕ್ಕೂ ನನ್ನ ತಂದೆ,ತಾಯಿ ಕಲಿಸಿಕೊಟ್ಟ ಸಂಸ್ಕಾರವೇ ಕಾರಣ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಆರ್.ಶಂಕರಪ್ಪ, ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿರದಿದ್ದರೆ ಖಂಡಿತಾ ಹಿಂದುಳಿದ ಸಮಾಜಗಳಿಗೆ ಇಷ್ಟೊಂದು ಅವಕಾಶಗಳು ಸಿಗುತ್ತಿರಲಿಲ್ಲ, ಹಾವನೂರು ಸಮಿತಿ ರಚಿಸಿ ಹಿಂದುಳಿದವರಿಗೂ ಬದುಕು ಕೊಟ್ಟ ಮಹಾಮಹಿಮರು ಅರಸು ಎಂದ ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ಆ ಧೈರ್ಯಶಾಲಿಯೇ ಸಿಎಂ ಆಗಬೇಕಾಯಿತು ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಮಾತನಾಡಿ, ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಯಾದವ ಸಮುದಾಯದ ಮತ್ತಷ್ಟು ಯುವಕರಿಗೆ ಪ್ರೇರಣೆ ನೀಡುವ ಕೆಲಸ ಮಾಡಲಾಗಿದೆ, ಇಂತಹ ಕಾರ್ಯಗಳ ಜತೆಗೆ ಯಾದವ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಹಿಂದುಳಿದ ವರ್ಗಗಳಲ್ಲೂ ಅನೇಕ ಪ್ರತಿಭೆಗಳಿವೆ, ಅವರನ್ನು ಗುರುತಿಸುವ ಕೆಲಸವನ್ನು ಅದೇ ಸಮುದಾಯದವರು ಮಾಡಬೇಕು, ಇದರಿಂದ ಸಮಾಜದಲ್ಲಿ ಅನೇಕರು ಧೈರ್ಯದಿಂದ ಸಾಧಕರಾಗಿ ಹೊರಬಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಬರೀಷ್, ಯಾದವ ಸಮುದಾಯದಲ್ಲೂ ಸಾಧಕರಿದ್ದಾರೆ ಎಂಬುದನ್ನು ಡಾ.ಶಂಕರಪ್ಪ ಹಾಗೂ ಡಾ.ಜಿ.ಪ್ರಸನ್ನಕುಮಾರ್ ಸಾಕ್ಷೀಕರಿಸಿದ್ದಾರೆ, ಮುಂದಿನ ದಿನಗಳಲ್ಲಿ ಸಮುದಾಯದಿಂದ ಸಾಧಕರನ್ನು ಗುರುತಿಸಿ ನಿರಂತರವಾಗಿ ಗೌರವಿಸುವ ಕೆಲಸ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಮುನಿರಾಜಪ್ಪ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ಅವರನ್ನು ಸನ್ಮಾನಿಸಲಾಯಿತು ಮತ್ತು ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ ಶುಭ ಹಾರೈಸಲಾಯಿತು. ಮುಖಂಡರಾದ ಮುನಿರಾಜಪ್ಪ, ವಕೀಲ ದಿವಾಕರ್ ಬಾಬು ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಮಾಜಿ ಸದಸ್ಯ ಮೇಸ್ತ್ರಿ ನಾರಾಯಣಸ್ವಾಮಿ ವಹಿಸಿದ್ದು, ಸಮುದಾಯದ ಮುಖಂಡರಾದ ಮುನಿರಾಮೊಪ್ಪ, ಮುನಿಸ್ವಾಮಪ್ಪ, ಕೆ.ವಿ.ಚೌಡಪ್ಪ, ದೊಡ್ಡವೀರಪ್ಪ, ಗೋಪಿ, ಕೆ.ಜೆ.ಗೋಪಾಲ್ ಪುರುಷೋತ್ತಮ್, ಮುನಿವೆಂಕಟಯಾದವ್, ಆರ್.ರಮೇಶ್, ಮಣಿ,ಕೆ.ವಿ.ಮಂಜು, ವಿಶ್ವನಾಥ್, ಸಂಜೀವಪ್, ಕೃಷ್ಣಮೂರ್ತಿ, ಮೇಸ್ತ್ರಿ ಮೂರ್ತಿ, ವೆಂಕಟೇಶ್, ಸತೀಶ್, ಪ್ರಬಾಕರ್, ವಿನಯ್ ಮತ್ತಿತರರಿದ್ದರು.