ಕೋಲಾರ:- ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಳಿಸುವ ಜನರ ನಿರ್ಧಾರ ಕೈಗೂಡಿದ್ದು, ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಸಿಎಂ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ದೇವನಹಳ್ಳಿ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಜಯಭೇರಿ ಬಾರಿಸಿದ ಹಿನ್ನಲೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿ ಸಿಹಿ ತಿನ್ನಿಸಿ ಸನ್ಮಾನಿಸಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ದೇವನಹಳ್ಳಿಯ ಮತದಾರರು ನನ್ನನ್ನು ಬೆಂಬಲಿಸಿ ಗೆಲುವು ನೀಡಿದ್ದಾರೆ, ಅವರಿಗೆ ನಾನು ಋಣಿಯಾಗಿದ್ದೇನೆ ಎಂದ ಅವರು, ಸದಾ ಅವರ ಸೇವೆಗೆ ಸಿದ್ದನಿದ್ದು, ಈ ಭಾಗದ ಅಭಿವೃದ್ದಿಗೆ ನನ್ನ ಶಕ್ತಿ ಮೀರಿ ಶ್ರಮ ಹಾಕುವುದಾಗಿ ಘೋಷಿಸಿದರು.
ನನ್ನ ಸ್ವಂತ ಜಿಲ್ಲೆಯಾದ ಕೋಲಾರ ಜಿಲ್ಲೆಯಲ್ಲೂ ಕಾಂಗ್ರೆಸ್ಗೆ ಉತ್ತಮ ಮನ್ನಣೆ ಸಿಕ್ಕಿದೆ ಎಂದ ಅವರು, ಈಗ ಸಿಕ್ಕಿರುವ ಅಧಿಕಾರ ತಲೆಗೆಹತ್ತದಂತೆ ನಾನು ಇದೊಂದು ಜವಾಬ್ದಾರಿ ಎಂದು ಅರಿತು ಕೆಲಸ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಸುಭದ್ರ ಸರ್ಕಾರ ನೀಡಲಿದೆ, ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಖಂಡಿತಾ ಈಡೇರಿಸುತ್ತೇವೆ ಎಂದ ಅವರು, ರಾಜ್ಯದ ಮತದಾರರಿಗೆ, ಪಕ್ಷದ ಹೈಕಮಾಂಡ್ ನಾಯಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್, ಮುಖಂಡ ರಾಮಪ್ರಸಾದ್ ಸೇರಿದಂತೆ ಕೋಲಾರದ ಜಿಲ್ಲೆಯ ಹಲವಾರು ಮುಖಂಡರು ಹಾಜರಿದ್ದು, ಶುಭ ಕೋರಿದರು.