ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : – ಜನಪರ ಆಡಳಿತ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ , ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಹೇಳಿದರು.
ತಾಲೂಕಿನ ಕಾಮಧೇನಹಳ್ಳಿಯಲ್ಲಿ ಗ್ರಾಮಸ್ಥರು ನೀಡಿದ ಅಭಿನಂದನೆ ಸ್ವೀಕರಿಸಿ , ಮತ ಹಾಕಿದ ಗಾಪಂ ಸದಸ್ಯರಿಗೆ ಧನ್ಯವಾದ ಅರ್ಪಿಸಿ ಅವರು ಮಾತನಾಡುತ್ತಿದ್ದರು.
ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹಣ ಹಂಚುವಿಕೆಯಲ್ಲಿ ಪೈಪೋಟಿಯನ್ನೇ ನಡೆಸಿದ್ದವು , ಹಿಂದುಗಳನ್ನು ಗುತ್ತಿಗೆ ಪಡೆದುಕೊಂಡಿದ್ದ ಬಿಜೆಪಿ ದೇವರುಗಳ ಮೇಲೆ ಆಣೆ ಮಾಡಿಸಿ ಓಟು ಕೇಳಿತ್ತು . ಆದರೆ , ಬುದ್ಧಿವಂತ ಮತದಾರರು ಎಲ್ಲವನ್ನು ದೇವರಿಗೆ ಒಪ್ಪಿಸಿ ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಿದ್ದಾರೆಂದರು.
ಮುಂದಿನ ಜನವರಿ ೧೫ ರ ನಂತರ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರನ್ನು ಒಗ್ಗೂಡಿಸಿ ದಿನಕ್ಕೊಂದು ಪಂಚಾಯತ್‌ಗೆ ಭೇಟಿ ನೀಡಿ ಅಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಗೆಹರಿಸಲು ಪ್ರಯತಿಸಲಾಗುವುದು ಎಂದು ಘೋಷಿಸಿದ ಅವರು , ಮುಂದಿನ ವಿಧಾನಸಭಾ ಕ್ಷೇತ್ರದಿಂದ ಹಿರಿಯ ಪ್ರಭಾವಿ ಮುಖಂಡರೊಬ್ಬರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಖಚಿತ , ಹಾಗೇನಾದರೂ ಆದಲ್ಲಿ ಕೋಲಾರ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುವುದು ದಿಟ ಎಂದರು.
ಹಿರಿಯ ಮುಖಂಡ ಶಂಕರೇಗೌಡ ಮಾತನಾಡಿ , ಗ್ರಾಮಗಳಲ್ಲಿ ಚುನಾವಣೆ ಎದುರಿಸುವಾಗ w ಮಾತ್ರವೇ ಪಕ್ಷ ರಾಜಕಾರಣ ಮಾಡಬೇಕು , ಉಳಿದ ಸಂದರ್ಭದಲ್ಲಿ ಇಡೀ ಗ್ರಾಮ ಪಂಚಾಯತ್ ಒಗ್ಗೂಡಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು , ಈ ವಿಚಾರದಲ್ಲಿ ಮಾರ್ಜೇನಹಳ್ಳಿ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಕಾಂಗ್ರೆಸ್ ಅನಿಲ್‌ಕುಮಾರ್‌ರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು .
ಭಾರತ ಸೇವಾದಳ ಹಾಗು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಚಿಕ್ಕ ವಯಸ್ಸಿನಲ್ಲಿಯೇ ರಾಜಕಾರಣಕ್ಕೆ ಇಳಿದು ಸುಮಾರು ೩೦ ವರ್ಷಗಳ ಅನುಭವ ಹೊಂದಿ , ಕೋಲಾರ ಚಿಕ್ಕಬಳ್ಳಾಪುರ ರಾಜಕಾರಣ ಇತಿಹಾಸ ಕುರಿತಂತೆ ಸ್ಪಷ್ಟವಾದ ಜ್ಞಾನ ಹೊಂದಿರುವ ಅನಿಲ್‌ಕುಮಾರ್ ರಾಜಕಾರಣದಲ್ಲಿ ಮತ್ತಷ್ಟು ಉನ್ನತ ಹುದ್ದೆಗೇರಲಿ ಎಂದು ಆಶಿಸಿದರು.
ಗ್ರಾಮದ ಮುಖಂಡ ಹಿರಿಯ ಕಾಂಗ್ರೆಸ್ಸಿನ ಚಿಕ್ಕಮುನಿವೆಂಕಟಪ್ಪ ಮಾತನಾಡಿ , ಅನಿಲ್‌ಕುಮಾರ್ ವಿಧಾನಪರಿಷತ್ ಸದಸ್ಯರಾಗಿ ಯಶಸ್ವಿಯಾಗಿ ಗಾಪಂ ಸದಸ್ಯರ ಸಮಸ್ಯೆಗಳಿಗೆ ಪರಿಹಾರವನ್ನು ರೂಪಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಚಂಜಿಮಲೆ ರಮೇಶ್ , ಕಾಮಧೇನಹಳ್ಳಿ ಗ್ರಾಮದ ಯುವ ಮುಖಂಡ ಅರುಣ್ ಇತರರು ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಮಣಿಘಟ್ಟ ಸೊಣ್ಣೆಗೌಡ , ಗಾಮದ ಮುಖಂಡರಾದ ನಾರಾಯಣಗೌಡ , ವರದೇನಹಳ್ಳಿ ವೆಂಕಟೇಶ್ , ಮಾರ್ಜೇನಹಳ್ಳಿ ಬಾಬು , ನವೀನ್‌ಕುಮಾರ್ , ಮಂಜುನಾಥ್ , ಗೋಪಾಲಗೌಡ , ವೈ.ಶಿವಕುಮಾರ್ , ಗಾಪಂ ಉಪಾಧ್ಯಕ್ಷೆ ಗಾಯಿತಿ , ಸದಸ್ಯರಾದ ವಿದ್ಯಾಶ್ರೀ , ಹೇಮಾವತಿ ಇತರರು ಭಾಗವಹಿಸಿದ್ದರು. ಹೈಕೋರ್ಟ್ ವಕೀಲ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.