

ಶ್ರೀನಿವಾಸಪುರ ತಾಲ್ಲೂಕು ಕೇತಗಾನಹಳ್ಳಿ ಗ್ರಾಮದ ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷ ನಡೆದು ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಇಲಾಖೆಯವರು ಕಳೆದ 6 ತಿಂಗಳಿನಿಂದ ಸಾವಿರಾರು ಎಕೆರೆ ಅರಣ್ಯ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡಿದ್ದಾರೆ. ಆದರೆ ರೈತರು ನ್ಯಾಯಾಲಯ ಮೆಟ್ಟಿಲೇರಿ ತಡೆಯಾಜ್ಞೆಯನ್ನು ತಂದು ತೆರವು ಮಾಡಿರುವ ಒತ್ತುವರಿ ಜಮೀನು ಪ್ರವೇಶ ಮಾಡಲು ಮುಂದಾಗಿದ್ದಾರೆ. ಇದರಿಂದ ಇಲಾಖೆ ಮತ್ತು ರೈತರ ಮಧ್ಯೆ ಸಂಘರ್ಷ ನಡೆಯುವಂತಾಗಿದೆ.
ಏಪ್ರಿಲ್ 5 ರಂದು ಶ್ರೀನಿವಾಸಪುರ ತಾಲ್ಲೂಕು ಕೇತಗಾನಹಳ್ಳಿ ಸಮೀಪ ರೈತರಿಂದ ವಶಪಡಿಸಿಕೊಂಡಿದ್ದ ಭೂಮಿಯ ಸ್ವಾಧಿನಕ್ಕೆ ರೈತರು ಪ್ರವೇಶ ಮಾಡಿ ರೈತರ ಮತ್ತು ಇಲಾಖೆ ಮಧ್ಯೆ ಸಂಘರ್ಷ ನಡೆಯಿತು. ಪೋಲಿಸರು ಮಧ್ಯೆ ಪ್ರವೇಶ ಮಾಡಿ ಕೋರ್ಟ್ ತಡೆಯಾಜ್ಞೆ ಇರುವ ಕಾರಣ ಅರಣ್ಯ ಇಲಾಖೆಯವರು ಮತ್ತು ರೈತರು ಪ್ರವೇಶ ಮಾಡಬಾರದು ಎಂದು ಉಳುಮೆ ಮಾಡಲು ಬಂದಿದ್ದ ರೈತರನ್ನು ವಾಪಸ್ಸು ಕಳುಹಿಸಿದ್ದರು.
ಅಕ್ರಮವಾಗಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದ ಜಮೀನಿಗೆ ರೈತರು ಪ್ರವೇಶ ಮಾಡಿದ್ದಾರೆ ಎಂದು ಉಳುಮೆ ಮಾಡಲು ಬಂದಿದ್ದ 5 ಟ್ರಾಕ್ಟರ್ಗಳು ಮತ್ತು ರೈತರ ಮೇಲೆ ಕೇಸು ದಾಖಲಿಸಿದ್ದರು.
ಕಳೆದ 2 ದಿನಗಳಿಂದ ಮುಂಗಾರು ಮಳೆ ಬೀಳುತ್ತಿರುವ ಕಾರಣ ರೈತರು ಒತ್ತುವರಿ ತೆರವು ಮಾಡಿರುವ ಪ್ರದೇಶಕ್ಕೆ ಉಳುಮೆ ಮಾಡಲು ನುಗ್ಗುತ್ತಾರೆ ಎಂದು ಭಾನುವಾರ ಅರಣ್ಯ ಇಲಾಖೆ ಡಿಎಫ್ಓ ಸರೀನಾ ಸಿಕ್ಕಲಿಗರ್ ನೇತೃತ್ವದಲ್ಲಿ 200 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಪೋಲಿಸರು ಕೇತಗಾನಹಳ್ಳಿ ಸಮೀಪದಲ್ಲಿ ರೈತರಿಂದ ವಶಪಡಿಸಿಕೊಂಡಿರುವ ಜಾಗಕ್ಕೆ ಭೇಟಿ ನೀಡಿದ್ದರು. ಉಳುಮೆ ಮಾಡಲು ಬಂದಿದ್ದ ಟ್ರಾಕ್ಟರ್ಗಳನ್ನು ವಶಪಡಿಸಿಕೊಳ್ಳಲು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒತ್ತುವರಿದಾರರ ಮತ್ತು ಅರಣ್ಯ ಇಲಾಖೆಯವರ ಮಧ್ಯೆ ಘರ್ಷಣೆ ನಡೆಯಿತು.