

ಶ್ರೀನಿವಾಸಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಶ್ರೀನಿವಾಸಪುರ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಶ್ರೀನಿವಾಸಪುರ ತಾಲ್ಲೂಕು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವು ತಾಲ್ಲೂಕಿನ ಕನಕಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ವೇಮಣ್ಣರವರು ಉದ್ಘಾಟಿಸಿ ಶುಭ ಹಾರೈಸಿದರು .
ಬೈರವೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೆಂಕಟ ರೆಡ್ಡಿ ಯವರು ಮಾತನಾಡುತ್ತಾ ದೀನ ದುರ್ಬಲರ ಸಮಗ್ರ ಅಭಿವೃದ್ಧಿ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಕೂಡ ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್ ಗಳಿಂದ ಸಾಲ ತೆಗೆದು ಕೊಟ್ಟ ಹೆಗ್ಗಳಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದು.
ಧರ್ಮಸ್ಥಳ ನಂಬಿಕೆಗೆ ಹೆಸರುವಾಸಿಯಾದ ಕ್ಷೇತ್ರ ಬಡಜನರ ಅಭಿವೃದ್ಧಿಗೆ ಪೂಜ್ಯರು ಮಾಡಿದ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯವಾದದ್ದು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.
ಜಿಲ್ಲಾ ನಿರ್ದೇಶಕರಾದ ಪದ್ಮಯ್ಯರವರು ಮಾತನಾಡುತ್ತ, ಹಸಿದವನಿಗೆ ಅನ್ನ ನೀಡುವುದಕ್ಕಿಂತ ಅನ್ನವನ್ನು ಉತ್ಪಾದಿಸುವ ಕಲೆಯನ್ನು ಕಲಿಸಿಕೊಡು ಎನ್ನುವುದು ಧರ್ಮಸ್ಥಳದ ಪೂಜ್ಯರ ಆಶಯ. ತಾನು ನೀಡುವ ದಾನ ಒಂದು ಹೊತ್ತಿನ ತುತ್ತಾಗದೇ ಮೂರು ಹೊತ್ತಿನ ಊಟಕ್ಕೆ ಆಸರೆಯಾಗಬೇಕು ತಾನು ನೀಡುವ ದಾನ ಬರೀ ದಾನವಾಗದೇ ಬಡವರ ಬದುಕಿಗೆ ಕಲೆಯಾಗಬೇಕು ಭರವಸೆಯ ಬೆಳಕಾಗಬೇಕು ಎನ್ನುವುದು ಪರಮ ಪೂಜ್ಯರ ಚಿಂತನೆ.
ಈ ನಿಟ್ಟಿನಲ್ಲಿ ಪರಮ ಪೂಜ್ಯರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ದುರ್ಬಲ ವರ್ಗದ ಸದಸ್ಯರಿಗೆ ಅರ್ಥಿಕ ಶಿಸ್ತಿನ ಜೊತೆ ಸ್ವಾವಲಂಬಿ ಬದುಕನ್ನು ಕಲಿಸಿಕೊಟ್ಟಿದೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ರವಿ ಕುಮಾರ್ ರವರು ಮಾತನಾಡುತ್ತಾ ಶ್ರೀನಿವಾಸಪುರ ತಾಲ್ಲೂಕಿನ ಜನತೆ ಬ್ಯಾಂಕಿನ ವ್ಯವಹಾರ ವನ್ನು ಪ್ರಾಮಾಣಿಕ ಮಾಡುತ್ತಿದ್ದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಒಪ್ಪಂದ ಮಾಡಿಕೊಂಡು ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ಬ್ಯಾಂಕ್ ನಿಂದ ನೀಡುತ್ತಿದ್ದು ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಬ್ಯಾಂಕ್ ನಿಂದ ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡಲಾಗುತ್ತಿದೆ. ನೀವು ಕಟ್ಟಿದ ಹಣ ಬ್ಯಾಂಕಿನಲ್ಲಿ ಭದ್ರವಾಗಿದೆ.
ನಂಬಿಕೆಗೆ ಅರ್ಹವಾದ ಧರ್ಮಸ್ಥಳ ಸಂಸ್ಥೆ ನಿಮ್ಮ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುಲು ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡು ನಿಮ್ಮ ಮನೆ ಬಾಗಿಲಿಗೆ ಅರ್ಥಿಕ ಸೇವೆಯನ್ನು ನೀಡುತ್ತಿದೆ. ಸಂಸ್ಥೆಯ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರಿಜಾ ಮತ್ತು ವಾಸುದೇವ್ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಹಾಗೂ ಗೋಪಾಲಕೃಷ್ಣ ಎಂ ಐ ಎಸ್ ಯೋಜನಾಧಿಕಾರಿ ಗಿರೀಶ್ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ನಾಗವೇಣಿ ರೆಡ್ಡಿಯವರು ಉಪಸ್ಥಿತರಿದ್ದರು.
ತಾಲೂಕಿನ 7 ವಲಯದ 67 ಒಕ್ಕೂಟಗಳ 350 ಮಂದಿ ಪದಾಧಿಕಾರಿಗಳು, ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು ಸೇವಾಪ್ರತಿನಿಧಿಗಳು ಸಿ ಎಸ್ ಸಿ ಸೇವಾದಾರರು, ಉಪಸ್ಥಿತರಿದ್ದರು.

