ಕೋಲಾರ : ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾವಣೆ ನಡೆ ಸದೇ ಆಡಳಿತಾಧಿಕಾರಿ ನೇಮಿಸುವ ಮೂಲಕ ವೈಯಕ್ತಿಕ ಭಿನ್ನಾಭಿಪ್ರಾಯಗಳಿಗಾಗಿ ಜಿಲ್ಲೆಯ ಬಡ ಮಹಿಳೆಯರು , ರೈತರ ಜೀವನಾಡಿಯಾಗಿದ್ದ ಡಿಸಿಸಿ ಬ್ಯಾಂಕ್ ಅನ್ನು ಬಲಿಕೊಡುವ ಪ್ರಯತ್ನ ಖಂಡನಿಯವಾಗಿದ್ದು , ಕೂಡಲೇ ತಾಯಂದಿರು ಎಚ್ಚೆತ್ತುಕೊಳ್ಳುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ , ಜಿಲ್ಲಾ ಸಹಕಾರ ಒಕ್ಕೂಟ , ಡಿಸಿಸಿ ಬ್ಯಾಂಕ್ , ಕೋಲಾರ ಮತ್ತು ಚಿಕ್ಕಬಳ್ಳಾಪುರ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ , ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘ , ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 70ನೇ ಅಖಿಲಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದ್ವೇಷವಿದ್ದರೆ ವ್ಯಕ್ತಿಗಳ ಮೇಲೆ ತೀರಿಸಿಕೊಳ್ಳಿ , ಬಡವರ ಹಿತಕಾಯುವ ಸಂಸ್ಥೆಯನ್ನು ಹಾಳು ಮಾಡಿದರೆ ಜನತೆ ಎಂದಿಗೂ ಕ್ಷಮಿಸುವುದಿಲ್ಲ , ಈ ಕೃತ್ಯಕ್ಕೆ ಕಾರಣರಾದ ಜಿಲ್ಲೆಯ ಕೆಲವು ಮುಖಂಡರು ಆತ್ಮಘಾತುಕತನ ಕೈಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕು , ಕೋಚಿಮುಲ್ , ಡಿಸಿಸಿ ಬ್ಯಾಂಕ್ ರೈತರನ್ನು ಆತ್ಮಹತ್ಯೆಯಿಂದ ದೂರ ಮಾಡಿ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿವೆ, ಈ ಸಂಸ್ಥೆಗಳು ಅವಿಭಜಿತ ಜಿಲ್ಲೆಯ ಎರಡು ಕಣ್ಣುಗಳಿ ದ್ದಂತೆ , ಹಿಂದಿನ ಸರ್ಕಾರ ಕೋಚಿಮುಲ್ ವಿಷಯದಲ್ಲಿ ತಪ್ಪು ಮಾಡಿ ನಂತರ ತಿದ್ದಿಕೊಂಡಿತು ಆದರೆ ಈಗ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಘೋರ ತಪ್ಪು ಎಸಗಿದ್ದಾರೆ ಎಂದರು.
ಸಹಕಾರ ವ್ಯವಸ್ಥೆಯ ನಿಜವಾದ ಫಲಾನುಭವಿಗಳು ಕೋಲಾರ ಜಿಲ್ಲೆಯವರು , ಜಿಲ್ಲೆಯಲ್ಲಿ 15 ವರ್ಷಗಳಿಂದ ಬರದ ನಡುವೆಯೂ 33 ರೈತರು ಮಾತ್ರ ಇಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ನದಿನಾಲೆಗಳಿರುವ ಇತರೆ ಜಿಲ್ಲೆಗಳಲ್ಲಿ 3 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ , ನಮ್ಮ ರೈತರ ಈ ಕ್ಷೀರೋದ್ಯಮ ಸ್ಥೆರ್ಯತುಂಬಿದೆ. ಡಿಸಿಸಿ ಬ್ಯಾಂಕ್ ಕೈಹಿಡಿದಿದೆ. ಮಹಿಳಾ ಸಬಲೀಕರಣ ಸಾರ್ಥಕವಾಗಿದೆ. ಮಹಿಳೆಯರಿಗೆ ಸಾಲ ನೀಡಿ ಆಸರೆಯಾಗಿದೆ ಎಂದರು.
ಸಹಕಾರಿ ಸಂಸ್ಥೆಯನ್ನೇ ನಾಶ ಮಾಡಲು ಹೊರಟಿರುವುದು ತಂದೆಯಿಂದ ಮಕ್ಕಳ ಕೊಲೆ ಮಾಡಿದಷ್ಟೇ ಸಮಾನ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋ ದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ , ಜಿಲ್ಲೆಯ ಬಡವರು , ರೈತರ ಜೀವನಾಡಿಯಾಗಿ ಎರಡು ಕಣ್ಣು ಗಳಂತಿದ್ದ ಕೋಚಿಮುಲ್ , ಡಿಸಿಸಿ ಬ್ಯಾಂಕ್ ವಿಷಯದಲ್ಲಿ ಕಣ್ಣು ಕೀಳುವ ಕೆಲಸ ಮಾಡಿದ್ದಾರೆ , ಸಹಕಾರಿಗಳಾದವರು ಸಹಕಾರಿ ಸಂಸ್ಥೆಯನ್ನೇ ನಾಶ ಮಾಡಲು ಹೊರಟಿರುವುದು ತಂದೆಯೊಬ್ಬ ತನ್ನ ಮಕ್ಕಳನ್ನು ಹತ್ಯೆ ಮಾಡಿದಷ್ಟು ಮಹಾ ಪಾಪಕ್ಕೆ ಸಮ ಎಂದರು.
ಸಹಕಾರಿ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಭಾಷಣ ಮಾಡುವವರು ಉಳಿದ 364 ದಿನ ಹಸ್ತಕ್ಷೇಪ ಮಾಡುತ್ತಲೇ ಇರುತ್ತಾರೆ , ಸಹಕಾರಿ ರಂಗದಿಂದಲೇ ಮೇಲೆ ಬಂದು ಏಣಿ ಒದೆಯುವುದುದುರಂತ ಎಂದರು.
ಸಹಕಾರಿ ಕಾಯಿದೆ ಎರಡು ಅಲಗಿನ ಕತ್ತಿಯಾಗಿದ್ದು , ರಾಜಕೀಯ ದ್ವೇಷಕ್ಕೆ , ಮತ್ತೊಬ್ಬರ ತೇಜೋವಧೆಗೆ ಬಳಕೆ ಯಾಗುತ್ತಿರುವುದು ವಿಷಾದಕರ , ಕಾಯಿದೆಯಲ್ಲಿ ಸರಳೀಕರಣದ ಅಗತ್ಯವಿದೆ ಎಂದು ತಿಳಿಸಿ , ಡಿಸಿಸಿ ಬ್ಯಾಂಕ್ ಉಳಿಸುವ ಕೆಲಸ ಮಾಡದಿದ್ದರೆ ಖಂಡಿತಾ ಬ್ಯಾಂಕ್ ಆಡಳಿತಾಧಿಕಾರಿ ನೇಮಿಸಿದವರಿಗೆ ಲೋಕಸಭಾ ಚುನಾವಣೆಂಯಲ್ಲಿ ಜನತೆ ತಕ್ಕ ಪಾಠ ಕಲಿಸಲು ಮಹಿಳೆಯರು ಸಂಕಲ್ಪ ಮಾಡುತ್ತಾರೆ ಎಂದು ಎಚ್ಚರಿಸಿದರು.
ಸಹಕಾರಿ ಬಲಕ್ಕೆ ಅಮಿತ್ ಸೂತ್ರ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ , ಸಹಕಾರ ರಂಗವನ್ನು ಬಲಗೊಳಿಸಲು ಕೇಂದ್ರ ಸಚಿವ ಅಮಿತ್ ಷಾ ಹೊಸ ನೀತಿನಿಯಮ ರೂಪಿಸುತ್ತಿದ್ದಾರೆ , ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಮುಕುಟದಂದಿದ್ದ ಡಿಸಿಸಿ ಬ್ಯಾಂಕ್ಗೆ ಚುನಾವಣೆ ನಡೆಸದೇ ಆಡಳಿತಾಧಿಕಾರಿ ನೇಮಕ ಸರ್ಕಾರದ ಬೇಜಾವಬ್ದಾರಿತನದ ಪರಮಾವಧಿ ಎಂದು ಖಂಡಿಸಿದರು.
ಕಳೆದ ಹತ್ತು ವರ್ಷಗಳ ಹಿ೦ದೆ 822 ಬ್ಯಾಂಕ್ ದಿವಾಳಿಯಾಗಿ ಜಿಲ್ಲೆಯ ಬಡವರು , ರೈತರು , ಮಹಿಳೆಯರು
ವಂಚನೆಗೊಳಗಾಗಿದ್ದರು ಅದೇ ಪರಿಸ್ಥಿತಿ ಮರುಕಳಿಸುವ ಆತಂಕ ಈಗ ಎದುರಾಗಿದೆ , ಸಹಕಾರಿ ಸಂಸ್ಥೆಗಳ ನಾಶಕ್ಕೆ ಸರ್ಕಾರ ಮುನ್ನುಡಿ ಬರೆದಂತಿದೆ ಎಂದು ಟೀಕಿಸಿದರು.
ಹೆಣ್ಮಕ್ಕಳ ಶಾಪ ಖಚಿತ ನಮ್ಮ ಶಕ್ತಿ ತೋರಿಸೋಣ
ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ ಮಾತನಾ ಡಿ, ಸಹಕಾರ ಸಂಘದಲ್ಲಿ ರಾಜಕಾರಣ ಬರಬಾರದು. ಇದರಿಂದ ಹೆಣ್ಣು ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಡಿಸಿಸಿ ಬ್ಯಾಂಕ್ ಮುಚ್ಚಲು ಹುನ್ನಾರ ನಡೆಸುತ್ತಿರುವವರಿಗೆ ಖಂಡಿತಾ ಹೆಣ್ಣು ಮಕ್ಕಳ ಶಾಪ ತಟ್ಟಲಿದೆ ಎಂದು ಎಚ್ಚರಿಸಿ , ದಿವಾಳಿಯಾಗಿದ್ದ ಬ್ಯಾಂಕಿಗೆ ಬ್ಯಾಲಹಳ್ಳಿ ಗೋವಿಂದಗೌಡ ಮತ್ತವರ ತಂಡ ಜೀವ ತುಂಬಿ ಮಹಿಳೆಯರ ಬದುಕು ಹಸನಾಗಲು ಕಾರಣರಾದರು ಎಂದರು.
ತವರು ಮನೆಗೆ ಹೋದಂತೆ ಹೋಗಿ ಅರಿಸಿನ , ಕುಂಕುಮದ ಜತೆ ಸಾಲ ಪಡೆದು ಜೀವನ ರೂಪಿಸಿಕೊಳ್ಳುತ್ತಿದ್ದ ಅವಿಭಜಿತ ಜಿಲ್ಲೆಯ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಕೂಡಲೇ ಮಹಿಳೆಯರು ಎಚ್ಚೆತ್ತುಕೊಂಡು ದುರ್ಗೆಯರಂತೆ ಡಿಸಿಸಿ ಬ್ಯಾಂಕ್ ಹಾಳು ಮಾಡೋರಿಗೆ ಪಾಠ ಕಲಿಸುತ್ತೇವೆ. ಇದಕ್ಕೆ ಸಹಕಾರ ನೀಡಿ ಎಂದು ಕೋರಿದರು.
ಮಹಿಳೆಯರು ಡಿಸಿಸಿ ಬ್ಯಾಂಕ್ ಸಾಲ ಪಡೆದು ಕುಟುಂಬ ಪೋಷಣೆ ಮಾಡುತ್ತಿದ್ದಾರೆ. ಆದರೆ , ಈಗ ಸರ್ಕಾರ ಡಿಸಿಸಿ ಬ್ಯಾಂಕ್ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ. ಹೆಣ್ಣು ಮಕ್ಕಳು ಎಲ್ಲಿ ಸಾಲ ತರಬೇಕು , ಬೇರೆ ಕಡೆ ಸಾಲ ಪಡೆದರೆ ಎಷ್ಟು ಬಡ್ಡಿಕೊಡ ಬೇಕು ಗೊತ್ತಾ ಎಂದು ಪ್ರಶ್ನಿಸಿ ಇದರಿಂದ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ , ಯಾವುದೇ ಕ್ಷೇತ್ರವಾದರೂ ಕೆಟ್ಟದ್ದು , ಒಳ್ಳೆಯದ್ದು ಇರುತ್ತದೆ. ಮಹಿಳೆಯರು ಸಬಲೀಕರಣಕ್ಕೆ ಸಹಕಾರ ಸಂಘ ಅಗತ್ಯ. ಪುರುಷರಿಗೆ ಸರಿಸಮಾನರಾಗಿ ಸಂಘ ಕಟ್ಟಿ ಯಶಸ್ಸು ಕಾಣಬೇಕು ಎಂದು ತಿಳಿಸಿ , ನಂಜೇಗೌಡರ ಹೆಸರನ್ನು ಸಹಕಾರ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದೆವು ಅದರಂತೆ ಅವರನ್ನು ಪುರಸ್ಕರಿಸಿದ್ದು, ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಸಿಇಒ ಕೆ.ಎಂ.ಭಾರತಿ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ , ಮಾಜಿ ಅಧ್ಯಕ್ಷರಾದ ಮೂರಾಂಡಹಳ್ಳಿ ಡಾ.ಗೋಪಾಲಪ್ಪ, ಉರಿಗಿಲಿ ರುದ್ರಸ್ವಾಮಿ, ನಿರ್ದೇಶಕರಾದ ಅಣ್ಣಿಹಳ್ಳಿ ನಾಗರಾಜ್, ಕೆ.ಎಂ.ವೆಂಕಟೇಶಪ್ಪ, ಪಿ.ಎಂ.ವೆಂಕಟೇಶ್, ಷೇಕ್ ಮೊಹಮದ್, ನರ್ಮದಾ ಪತ್ತಿನ ಸಹಕಾರ ಸಂಘದ ಕರ್ಯದರ್ಶಿ ಸುನಿತಾ, ಉಪಾಧ್ಯಕ್ಷೆ ಅಂಬಿಕಾ, ವಿಜಯಲಕ್ಷ್ಮಿ , ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಎನ್. ಮುರಳಿಧತ್ , ನಾಗರಾಜಯ್ಯ , ನಾರಾಯಣದಾಸ್ , ಶಬ್ಬೀರ್ ಅಹ್ಮದ್ , ವಿ.ಈಶ್ವರ್ , ಎಲ್. ರೂಪೇಶ್, ಸಿ.ವಿ.ನಾಗರಾಜ್, ಸಿಇಒ ಜಿ.ಗಂಗಾಧರ್, ಕೆಯುಡಿದ ಮಾಜಿ ಅಧ್ಯಕ್ಷ ವಿಜಯ ಕುಮಾರ್, ಯೂನಿಯನ್ ಲಕ್ಷ್ಮಿ, ರವಿ ಮತ್ತಿತರರು ಉಪಸ್ಥಿತರಿದ್ದರು.