ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ, ಮಾ. 17 : ಸಿನೆಮಾ ಹಾಗೂ ಧಾರಾವಾಹಿ ಭರಾಟೆಯಲ್ಲಿ ನಾಟಕ ಸಂಸ್ಕೃತಿ ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಸಮಾಜ ಸೇವಕ ಶ್ರೀ ಗುಂಜೂರು ಆರ್. ಶ್ರೀನಿವಾಸರೆಡ್ಡಿ ತಿಳಿಸಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ದಾನ ವೀರ ಶೂರ ಕರ್ಣ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಂದು ನಾಟಕ ಪ್ರದರ್ಶಿಸಬೇಕಾದರೆ ಅದರ ಹಿಂದೆ ಹಲವಾರು ತಿಂಗಳುಗಳ ಅಭ್ಯಾಸ, ಹಾವ, ಭಾವ, ಕಠಿಣ ಶ್ರಮ ಇರುತ್ತದೆ. ನಾಟಕಗಳನ್ನು ಇಂದಿಗೂ ಉಳಿಸಿ ಬೆಳೆಸುತ್ತಿರುವುದು ಗ್ರಾಮೀಣ ಭಾಗದ ಜನರೇ. ನಾಟಕಗಳಲ್ಲಿ ಹಲವಾರು ರೀತಿಯ ಪಾತ್ರಗಳು ತಮ್ಮದೇ ಆದ ದಾಟಿಯಲ್ಲಿ ನೈಜವಾಗಿ ಅಭಿನಯಿಸುತ್ತಾರೆ. ಇಂತಹ ಕಲೆಗಳನ್ನು ಪ್ರೋತ್ಸಾಹಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ.
ಕಲೆ ಕೇವಲ ಮನರಂಜನೆಗಷ್ಟೇ ಅಲ್ಲದೆ ಅರಿವಿನ ವಿಕಾಸಕ್ಕೆ ಪೂರಕ. ಸಿನೆಮಾ-ಧಾರಾವಾಹಿ ಪರಿಪೂರ್ಣ ರಂಗ ಕಲೆಗಳು ಅಲ್ಲ. ಆದರೆ, ನಾಟಕಗಳು ನಿಜವಾದ ರಂಗಕಲೆ. ನಾಟಕದಲ್ಲಿ ಭಾವನೆ, ಸನ್ನಿವೇಶಗಳಿಗೆ ತಕ್ಕಂತೆ ಪಾತ್ರಗಳ ಅನುಕರಣೆ ನೋಡುಗರನ್ನು ಹಿಡಿದಿಡುತ್ತವೆ. ಹೀಗಾಗಿ ರಂಗಭೂಮಿ ಹಳ್ಳಿಗಾಡಿನ ಪ್ರದೇಶಗಳಲ್ಲಿ ಇನ್ನು ಜೀವಂತವಾಗಿದೆ. ಒಮ್ಮೆ ನೋಡಿದ ಸಿನೆಮಾ ಹಾಗೂ ಧಾರವಾಹಿಗಳಲ್ಲಿ ಅದೇ ರಾಗ, ಅದೇ ಹಾಡು ಇರುತ್ತದೆ. ಆದರೆ, ನಾಟಕಗಳಲ್ಲಿ ವಿಭಿನ್ನ ಪ್ರಕಾರಗಳು ಇರುವುದನ್ನು ಕಾಣಬಹುದು. ರಂಗ ನಾಟಕಗಳು ನೈಜತೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತಮ ಪಡಿಸುವಲ್ಲಿ ಮಹತ್ವ ಪೂರ್ಣವಾದವುಗಳಾಗಿವೆ. ರಂಗ ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗ ಕಲೆಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಮಾಡುವಂತೆ ತಿಳಿಸಿದರು. ಆಧುನಿಕತೆಯಿಂದಾಗಿ ಮರೆಯಾಗುತ್ತಿರುವ ನಮ್ಮ ರಂಗನಾಟಕಗಳನ್ನು ಉಳಿಸಿ ಬೆಳೆಸುವತ್ತ ಕಲಾವಿದರು ಮತ್ತು ಕಲಾಸಕ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ರಂಗಭೂಮಿ ಮತ್ತು ರಂಗ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವತ್ತ ಇಂದಿನ ಯುವ ಜನಾಂಗ ಚಿಂತನೆ ನಡೆಸಬೇಕಿದೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ರಂಗ ನಾಟಕಗಳಿಂದ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಂಗ ಮಹತ್ವದ ಸಾಂಸ್ಕೃತಿಕ ಕಲೆಗಳು ನಮ್ಮ ಸಾಮಾಜಿಕ ಬದುಕಿನಲ್ಲಿ ಹೊಸ ಆಯಾಮ ನೀಡಲಿವೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬರೂ ಸಾಮಾಜಿಕ ಬದುಕಿನಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಬಣದ ಮುಖಂಡರು, ಅಭಿಮಾನಿಗಳು, ಗ್ರಾಮಸ್ಥರು ಹಾಜರಿದ್ದರು.