ಕೋಲಾರ,ಅ.10: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಂಚಾಳಗೇಟ್, ಶ್ರೀ ಈಶ್ವರಮ್ಮಾಜಿ ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಫಾರ್ಮಸಿ ಕಾಲೇಜುಗಳ ವತಿಯಿಂದ ಏರ್ಪಡಿಸಿದ್ದ ಲುಂಬಿಣಿ ಕಲಾಮಂದಿರ, ಬುದ್ಧ ಪ್ರತಿಮೆ ಅನಾವರಣ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಪ್ರೆಷರ್ಸ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಅಕ್ರಂಪಾಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಲ್ಲಿ ಬುದ್ದನಂತಿರಬೇಕು, ಜ್ಞಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಿರಬೇಕು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಜ್ಞಾನಿಗಳಾಗಿ ಬೆಳೆಯಬೇಕೆಂದು ಶುಭ ಹಾರೈಸಿದರು.
ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಮಾತನಾಡಿ, ವಿದ್ಯಾರ್ಥಿಗಳಿಗೆ ದುಚ್ಛಟಗಳಿಂದ ದೂರ ಉಳಿದು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮಿ ಸಂಸ್ಥೆಗೆ, ಗುರುಗಳಿಗೆ, ತಾಯಿ ತಂದೆಗೆ ಮತ್ತು ರಾಷ್ಟ್ರಕ್ಕೆ ಸೇವಾ ಮನೋಭಾವನೆಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೋಲಾರ ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸಂಸ್ಥೆಯ ಶೈಕ್ಷಣಿಕ ವ್ಯವಸ್ಥೆಯ ಮತ್ತು ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಪ್ರಶಂಸಿಸಿದ ಅವರು ವಿದ್ಯಾರ್ಥಿ ದೆಸೆಯಿಂದಲೇ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕಗಳಲ್ಲಿ ತೊಡಗಿಕೊಂಡು ಸೇವಾ ಮನೋಭಾವನೆಯನ್ನು ಹೊಂದಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ವಿದ್ಯಾರ್ಥಿಗಳಿಗೆ ವಿಶೇಷವಾದ ಜವಾಬ್ಧಾರಿಗಳನ್ನು ನಿರ್ವಹಿಸಬೇಕೆಂದು ಕರೆ ನೀಡಿದರು, ಸಮಾನತೆ, ಭಾತೃತ್ವ, ಜೊತೆಗೆ ಮೂಲಭೂತ ಕರ್ತವ್ಯಗಳನ್ನು ದೇಶಕ್ಕಾಗಿ ನಿರ್ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳಾದ ನೀವುಗಳು ನಿಮ್ಮ ತಂದೆ, ತಾಯಿ, ಅಣ್ಣ, ಅಕ್ಕ ರವರನ್ನು ತುಂಬಾ ಪ್ರೀತಿಸುತ್ತಿದ್ದೀರಾ? ಹಾಗಾದರೆ ಹೊರಗಡೆ ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಹಠಮಾಡಿ, ಮನವೊಲಿಸಿ ಜೀವರಕ್ಷಣೆ ಮಾಡಬೇಕೆಂದು ಕಿವಿಮಾತು ಹೇಳಿದರು. ಭಾರತ ದೇಶ ಇಂದು ಪ್ರಪಂಚದಲ್ಲಿ 3ನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಹೇಗೆಂದರೆ ನಿಮ್ಮ ಜ್ಞಾನ, ನಿಮ್ಮ ಸಂಪನ್ಮೂಲ, ನಿಮ್ಮ ಸಂವಹನ ಕೌಶಲ್ಯಗಳಿಂದ. ಹಾಗಾಗಿ ನೀವುಗಳು ಶೈಕ್ಷಣಿಕವಾಗಿ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕೆಂದು ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಡಾ: ಎಂ.ಚಂದ್ರಶೇಖರ್ ಮಾತನಾಡಿ, ಜಿಲ್ಲಾಧಿಕಾರಿಗಳು ಮತ್ತು ರಕ್ಷಣಾಧಿಕಾರಿಗಳು ಅಂಶಗಳನ್ನು ಉಲ್ಲೇಖಿಸಿ ಈ ಸಂಸ್ಥೆಯು ತುಂಬಾ ಕಷ್ಠ ಕಾರ್ಪಣ್ಯಗಳಿಂದ ಬೆಳೆದು ಈಗ ಬೃಹದಾಕಾರವಾಗಿ ನಿಂತಿದೆ, 1986 ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯೊಂದಿಗೆ ಸ್ಥಾಪನೆಯಾದ ಈ ಸಂಸ್ಥೆ ಅನೇಕ ಏಳು ಬೀಳುಗಳು ಮತ್ತು ಆರ್ಥಿಕ ಸಮಸ್ಯೆಗಳನ್ನು ಹೊಂದಿದೆ. ಆದರೂ ಈ ತಹಲ್ ವರೆವಿಗೂ ಉತ್ತಮವಾದ ಶಿಕ್ಷಣವನ್ನು ನೀಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ವಿದ್ಯಾರ್ಥಿನಿಲಯಗಳ ಸೌಲಭ್ಯವನ್ನು ಸಹ ನೀಡುತ್ತಾ ಬಂದಿದೆ. ಪ್ರೌಢಶಿಕ್ಷಣದ ನಂತರ ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣದ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕವನ್ನು ಭರಿಸುವುದಕ್ಕಾಗದೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಬೆಳವಣಿಗೆಗಳು ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಇದನ್ನರಿತ ನಾವುಗಳು ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವತಿಯಿಂದ ವೃತ್ತಿ ತರಬೇತಿ ಕೇಂದ್ರಗಳನ್ನು ತೆರೆದು ತರಬೇತಿಯನ್ನು ನೀಡಿ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆಯ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳು, ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ವೆಂಕಟೇಶಪ್ಪ ಮತ್ತು ಪದಾಧಿಕಾರಿಗಳು, ಆಡಳಿತಾಧಿಕಾರಿ ಎಸ್. ಲಕ್ಷ್ಮೀನಾರಾಯಣರೆಡ್ಡಿ, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯರುಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುನಿಕೃಷ್ಣಪ್ಪ ತಂಡದಿಂದ ಬುದ್ಧ ಪ್ರಾರ್ಥನೆ ನಡೆಯಿತು. ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು, ಸಾಮೂಹಿಕವಾಗಿ ನಾಡಗೀತೆ ಹಾಡುವುದರೊಂದಿಗೆ ನಾಡಿನ ಬಗ್ಗೆ ಹೆಮ್ಮೆಹೊಂದುವಂತೆ ಸಮಾನತೆಯನ್ನು ಸಾರಲಾಯಿತು. ಭಾರತ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ರಾಜ್ಯಗಳ ಕಲಾ ತಂಡಗಳಿಂದ ನೃತ್ಯ, ಭರತನಾಟ್ಯ, ಕತಕ್ಕಳಿ, ಕುಚುಪುಡಿ ಮುಂತಾದ ಸಾಂಸ್ಕøತಿಕ ಚಟುವಟಿಕೆಗಳು ಮನಮುಟ್ಟುವಂತಿತ್ತು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಜಾನ್ಸಿ ಪ್ರಸನ್ನ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.