ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಉದ್ಘಾಟಿಸಿದರು.
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಸಹಾಯ ಹಸ್ತ ನೀಡಬೇಕು. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಜತೆಗೆ ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಾಲೆಗೆ ಎರಡು ಬಾರಿ ಪರಿಸರ ಶಾಲೆ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರಿ ಶಾಲಾ ಶಿಕ್ಷಕ ಎಸ್.ಆರ್.ಧರ್ಮೇಶ್ ಮಕ್ಕಳಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ತಮ್ಮ ಸಂಬಳದಲ್ಲಿ ಪ್ರತಿ ತಿಂಗಳೂ ರೂ.10 ಸಾವಿರ ಮೀಸಲಿಟ್ಟಿದ್ದಾರೆ. ಅಂಥ ನಿಸ್ವಾರ್ಥ ದಾನಿಗಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.
ರಂಗಕರ್ಮಿ ಪಿ.ನಾಗರಾಜ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಮುಖ ಪಾತ್ರ ವಹಿಸಿದೆ. ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲ ಸೌಲಭ್ಯ ಒದಗಿಸುತ್ತಿದೆ. ಗ್ರಾಮಸ್ಥರೂ ಸಹ ಶಾಲೆ ವಿಷಯದಲ್ಲಿ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಆದ್ದರಿಂದಲೆ ಶಾಲೆ ಪ್ರಗತಿ ಪಥದಲ್ಲಿ ಸಾಗಿದೆ ಎಂದು ಹೇಳಿದರು.
ಶೀಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಮಾತನಾಡಿ, ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಮಕ್ಕಳ ಸೇವೆಯನ್ನು ದೇವರ ಸೇವೆಯೆಂದು ತಿಳಿದು ಮಾಡುತ್ತಿದ್ದೇನೆ. ಮಕ್ಕಳೇ ಸಮಾಜದ ನಿಜವಾದ ಆಸ್ತಿ. ಅವರು ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೊಡುವುದರಲ್ಲಿ ಇರುವ ತೃಪ್ತಿಯೇ ಬೇರೆ. ಅದನ್ನು ಕೊಟ್ಟು ಅನುಭವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಹಾಗೂ ಬಣ್ಣದ ಬಟ್ಟೆ ವಿತರಿಸಲಾಯಿತು. ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಶಿವಣ್ಣಾಚಾರ್, ಸಿಆರ್‍ಪಿ ರೂಪ, ಎಸ್.ಆರ್.ಧರ್ಮೇಶ್, ಮುನೇಗೌಡ, ನಂಜಪ್ಪ, ನಾಗೇಶ್, ಗೋಪಾಲಪ್ಪ, ಅಶ್ವತ್ಥಪ್ಪ, ಹರೀಶ್, ಶ್ರೀನಿವಾಸ್, ನಾರಾಯಣಸ್ವಾಮಿ, ಶ್ರೀನಿವಾಸ್, ಕೆ.ಸಿ.ಕೃಷ್ಣ, ಕೆ.ಸಿ.ಶ್ರೀನಿವಾಸ್, ಸಂತೋಷ್, ಶಿವು, ಸುಶೀಲಮ್ಮ, ವಿ.ಮಂಗಳ ಇದ್ದರು.