ಶ್ರೀನಿವಾಸಪುರ,ಮೇ.26: ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಲು ವಿಶೇಷ ತಂಡ ರಚನೆ ಮಾಡಿ ರೈತರು ಹಾಗೂ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಕೊಳತೆ ಮಾವು ಸಮೇತ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬಾಗ ಹೋರಾಟ ಮಾಡಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮಾವಿಗೆ ಪ್ರಸಿದ್ದಿ ಆಗಿರುವ ತಾಲ್ಲೂಕಿನಲ್ಲಿ ಮಾವು ಮಾರುಕಟ್ಟೆಯ ಅಭಿವೃದ್ದಿಗೆ ಆದ್ಯತೆ ನೀಡುವಲ್ಲಿ 40 ವರ್ಷಗಳಿಂದ ರಾಜಕೀಯ ಮಾಡುತ್ತಿರುವ ರೆಡ್ಡಿ ಸ್ವಾಮಿರವರು ಸಂಪೂರ್ಣವಾಗಿ ವಿಪಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅವ್ಯವಸ್ಥೆ ಹಾಗೂ ಜನಪ್ರತಿನಿದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಿದ್ದರೆ ಮಾರುಕಟ್ಟೆ ಕೆರೆ ಕುಂಟೆಯಾಗಿ ಮಾರ್ಪಟ್ಟು ವರ್ಷದ ಪಸಲು ಒಂದೇ ದಿನದಲ್ಲಿ ಸುರಕ್ಷತೆಯಿಲ್ಲದೆ ಟನ್ ಮಾವಿನ ಮೇಲೆ ಸಾವಿರ ರೂಪಾಯಿ ಕಡಿತ ಮಾಡುವ ಮುಖಾಂತರ ಹರಾಜು ನಡೆಯುತ್ತಿದೆ. ಅಧಿಕಾರಿಗಳ ಬೇಜವಬ್ದಾರಿಯಿಂದ ರೈತರ ನಷ್ಟ ತುಂಬಿಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು.
ತುತ್ತು ಅನ್ನಕ್ಕಾಗಿ ಹೊರ ರಾಜ್ಯಗಳಿಂದ ಮಾವು ಕೀಳಲು ಹಾಗೂ ಮಾರುಕಟ್ಟೆಯಲ್ಲಿ ಕೆಲಸ ಮಾಡಲು ಬರುವ ಕಾರ್ಮಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಿರಲಿ ಗುಣಮಟ್ಟದ ಊಟವಿಲ್ಲ ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ ಕುಡಿಯುವ ನೀರಿಲ್ಲ, ಕಲುಷಿತ ನೀರೇ ಹಾಗೂ ಬಯಲೇ ಶೌಚಾಲಯಕ್ಕೆ ಗತಿಯಾಗಿದೆ ಅಷ್ಟರ ಮಟ್ಟಿಗೆ ಮಾರುಕಟ್ಟೆಯಲ್ಲಿ ಅವ್ಯವಸ್ಥೆಯ ಕೂಪವಾಗಿದೆ. ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಚುನಾಯಿತ ಶಾಸಕರು ನೆಪಮಾತ್ರಕ್ಕೆ ಸಭೆ ಕರೆದು ಪತ್ರಿಕಾ ಮಾದ್ಯಮದ ಮುಂದೆ ಕಾಣಿಸಿಕೊಂಡು ಹೋದರೆ ಮತ್ತೆ ವರ್ಷ ಮಾರುಕಟ್ಟೆಯ ಕಡೆ ತಲೆ ಹಾಕುವುದಿಲ್ಲವೆಂದು ಆರೋಪ ಮಾಡಿದರು.
ಸಾವಿರಾರು ಜನ ಕೆಲಸ ನಿರ್ವಹಿಸುವ ಮಾರುಕಟ್ಟೆಯಲ್ಲಿ ಆಸ್ಪತ್ರೆ ಪೋಲಿಸ್ಠಾಣೆ ಸಿ,ಸಿ ಕ್ಯಾಮಾರಗಳ ವ್ಯವಸ್ಥೆಯಿಲ್ಲ, ರಾತ್ರಿ ಆದರೆ ಕುಡುಕರ ಕಾಟ ಇದರ ಜೊತೆಗೆ ಸಿಬ್ಬಂದಿಯ ನೆಪದಲ್ಲಿ ಸರ್ಕಾರಕ್ಕೆ ಬರುವ ಆದಾಯವನ್ನು ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆಂದು ಕಿಡಿಕಾರಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಮಾವು ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅಧಿಕಾರಿಗಳು ವಿಪಲವಾಗಿದ್ದಾರೆ. ವರ್ಷದ ರೈತರ ಬೆವರ ಹನಿಯನ್ನು ಒಂದೇ ದಿನದಲ್ಲಿ ಮಳೆರಾಯ ಕಸಿದುಕೊಂಡರೆ ಉಳಿದ ಭಾಗವನ್ನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮೀಟರ್ ಬಡ್ಡಿದಂದೆಯಂತೆ ಕಮೀಷನ್ ಪಡೆಯುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಆದಿಕಾರಿಗಳು ಆಲಿಕಲ್ಲು ಮಳೆಯಲ್ಲಿ ಕೊಚ್ಚಿ ಹೋಗಿದ್ದಾರೆಂದು ವ್ಯಂಗ್ಯವಾಡಿದರು.
ಒಂದು ಕಡೆ ಕಮೀಷನ್ ಹಾವಳಿ ಮತ್ತೊಂದು ಕಡೆ ಯಾವುದೇ ಮಂಡಿಯಲ್ಲೂ ಪರವಾನಗಿ ಪಡೆದಿರುವ ಜಿ.ಎಸ್.ಟಿ ಸಮೇತ ರಸೀದಿಯನ್ನು ನೀಡುವುದಿಲ್ಲ ಜೊತೆಗೆ ವ್ಯಾಪಾರಸ್ಥರು ಮತ್ತು ದಲ್ಲಾಳರ ಒಳ ಒಪ್ಪಂದಿಂದ ಹರಾಜಿನಲ್ಲೂ ರೈತರಿಗೆ ಮೋಸ ಆಗುತ್ತಿದ್ದರೂ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆ ಇದೆ .
ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಡಳಿತ ರೈತರ ತೋಟದಿಂದ ಮಾರುಕಟ್ಟೆಗೆ ಮಾವು ಸಾಗಿಸಲು ಉಚಿತ ವಾಹನ ವ್ಯವಸ್ಥೆ ಮಾಡುವ ಜೊತೆಗೆ ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್, ಬಿಳಿ ಚೀಟಿ ಹಾವಳಿ ತಡೆಗಟ್ಟಲು ವಿಶೇಷ ತಂಡ ರಚನೆ ಮಾಡಿ ರೈತರು ಹಾಗೂ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಬೇಕೆಂಧು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರವರು ಸಿಬ್ಬಂದಿ ಕೊರತೆ ಜೊತೆಗೆ ಅನುದಾನ ಇಲ್ಲ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವು, ಸಹದೇವಣ್ಣ, ಮುನಿರಾಜು, ಶೇಕ್ಶಪಿಹುಲ್ಲಾ, ತೆರ್ನಹಳ್ಳಿ ಭದ್ರೇಗೌಡ, ಹೆಬ್ಬರಿ ರಾಮಕೃಷ್ಣ, ರತ್ನಪ್ಪ ಕೋಳತೂರು ಭಾಸ್ಕರ್, ರಾಜೇಶ್, ವಿಜಯ್ಪಾಲ್, ದೇವರಾಜ್, ಗಿರೀಶ್, ಶೈಲ, ರಾಧಮ್ಮ, ಮುಂತಾದವರಿದ್ದರು.