ಶ್ರೀನಿವಾಸಪುರ: ಇಲ್ಲಿನ ತಾಲ್ಲೂಕು ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ ನೀಡಿ, ವಿವಿಧ ವಿಭಾಗಗಳ ಪ್ರಗತಿ ಪರಿಶೀಲಿಸಿದರು. ಕಚೇರಿ ಅವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವಾಗಿ ಚುನಾವಣಾ ಫಾರಂ ಪ್ರೊಸೆಸಿಂಗ್ ಮತ್ತು ಫ್ರೂಟ್ಸ್ ಎಫ್ಐಡಿ ಪ್ರಗತಿ ಪರಿಶೀಲನೆ ನಡೆಸಿದರು.
ರೈತರಿಗೆ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡುವ ಉದ್ದೇಶದಿಂದ ಎಫ್ಐಡಿ ನೋಂದಣಿ ಕಾರ್ಯ ಚುರುಕುಗೊಳಿಸಬೇಕು. ಕಂದಾಯ ಇಲಾಖೆ ಸಿಬ್ಬಂದಿ, ಕೃಷಿ ಮತ್ತಿತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಫ್ರೂಟ್ಸ್ ಎಫ್ಐಡಿ ನೋಂದಣಿ ಗುರಿ ತಲುಪಬೇಕು. ಅದಕ್ಕೆ ಪೂರಕವಾಗಿ ಈ ಯೋಜನೆಯಿಂದ ಆಗುವ ಪ್ರಯೋಜನ ಕುರಿತು ರೈತರಿಗೆ ತಿಳಿಸಬೇಕು ಎಂದು ತಾಕೀತು ಮಾಡಿದರು.
ತಾಲ್ಲೂಕು ಕಚೇರಿ ಆವರಣಕ್ಕೆ ಸಿಮೆಂಟ್ ಹಾಸು ನಿರ್ಮಿಸುವ ಮತ್ತು ಕಚೇರಿ ಮುಂದೆ ರಸ್ತೆ ನಿರ್ಮಿಸುವ ಕಾಮಗಾರಿ ವೀಕ್ಷಿಸಿದರು ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಿದರು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ತಾಲ್ಲೂಕಿನ ರೋಣೂರು ಹೋಬಳಿ ವ್ಯಾಪ್ತಿಯ ಕೊಟ್ರಗುಳಿ ಮತ್ತು ದೇವಲಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಫಾರಂ ನಂಬರ್ 6,7,8 ಅರ್ಜಿಗಳು ಮತ್ತು ಎಫ್ಐಡಿ ನೋಂದಣಿ ಕುರಿತು ಪರಿಶೀಲಿಸಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮತ್ತು ತಾಲ್ಲೂಕು ಕಚೇರಿ ಸಿಬ್ಬಂದಿ ಇದ್ದರು.