ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರವು ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗಳಿಗೆ ದಿನಾಂಕ 03.02.2021 ರಂದು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ‘ತೆಂಗಿನ ಸುರುಳಿ ಸುತ್ತುವ ಬಿಳಿನೊಣದ ನಿರ್ವಹಣೆ ತರಬೇತಿ ಕಾರ್ಯಕ್ರಮ’ ವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಶ್ರೀ ತುಳಸಿರಾಮರವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆಂಗಿನ ಸುರುಳಿ ಸುತ್ತುವ ಬಿಳಿನೊಣದ ನಿರ್ವಹಣೆಯ ಬಗ್ಗೆ ಸವಿಸ್ತಾರವಾಗಿ ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳಿಗೆ ತಿಳಿಸಿದರು. ಈ ಕೀಟವು 2016ನೇ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ತಮಿಳುನಾಡಿನ ಪೊಳ್ಳಾಚಿ ಹಾಗೂ ಕೇರಳದ ಪಾಲಕ್ ಕಾಡಿನಲ್ಲಿ ತೆಂಗಿನ ಗರಿಗಳ ಮೇಲೆ ಕಾಣಿಸಿಕೊಂಡಿತ್ತು. ಕೇರಳದ ಕೃಷಿ ವಿಶ್ವವಿದ್ಯಾಲಯ ಹಾಗೂ ಐ.ಸಿ.ಎ.ಆರ್. ನ ಎನ್.ಬಿ.ಎ.ಐ.ಆರ್- ಬೆಂಗಳೂರು ಇವರು ಈ ಕೀಟವು ಅಲ್ಯಾಲೊಡಿಕಸ್ ರುಗಿಯೋಪರ್ಕುಲೆಟಸ್ ಎಂದು ಖಚಿತಪಡಿಸಲಾಯಿತು. ಕೇವಲ 9 ತಿಂಗಳ ಅವಧಿಯಲ್ಲಿ (ಆಗಸ್ಟ್ 2016 ರಿಂದ ಜನವರಿ 2017) ರಲ್ಲಿ ಈ ಕೀಟ ಕೇರಳದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕ ಉಡುಪಿ ಜಿಲ್ಲೆಯಲ್ಲಿಯೂ ಕೂಡ ಕಾಣಿಸಿಕೊಂಡಿತ್ತು. ಈ ಕೀಟವು ತೀವ್ರವಾಗಿ ಹರಡಲು ಸಹಾಯಕವಾದ ಅಂಶಗಳೆಂದರೆ, ರಾಜ್ಯದ ಉದ್ದಗಲಕ್ಕೂ ತೆಂಗಿನಕಾಯಿ ಸಾಗಾಟ, ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿಯ ಉಪಯೋಗ ಕೂಡ ಕಾರಣವಾಗಿದೆ. ಮರಿ ಮತ್ತು ವಯಸ್ಕ ರೋಗೋಸ್ ಬಿಳಿನೊಣಗಳು ತೆಂಗಿನ ಎಲೆಗಳ ಕೆಳಭಾಗದಲ್ಲಿ ರಸ ಹೀರುವುದರಿಂದ ನೀರು ಮತ್ತು ಪೌಷ್ಠಿಕಾಂಶಗಳನ್ನು ಸರಬರಾಜನ್ನು ತಡೆಯುತ್ತದೆ. ಅಲ್ಲದೇ ಕೀಟಗಳು ಸಿಹಿ ದ್ರವವನ್ನು ಸ್ರವಿಸುತ್ತವೆ. ಈ ದ್ರವದ ಮೇಲೆ ಕ್ಯಾಪ್ನೋಡಿಯಂ ಎಂಬ ಕಪ್ಪು ಶೀಲಿಂದ್ರ ಬೆಳೆಯುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ತಡೆಯುತ್ತದೆ.
ರುಗೋಸ್ ಬಿಳಿನೊಣದ ಬಾಧೆಯ ಲಕ್ಷಣಗಳೆಂದರೆ, ತೆಂಗಿನ ಎಲೆಗಳ ಕೆಳಭಾಗದಲ್ಲಿ ಬಿಳಿ ಮೊಟ್ಟೆಯ ಸುರುಳಿಗಳು ಕಾಣಿಸಿಕೊಳ್ಳುತ್ತವೆ. ಅನಂತರ ಎಲ್ಲ ಸುರುಳಿಗಳು ಒಟ್ಟುಗೂಡಿ ಸಂಪೂರ್ಣವಾಗಿ ಎಲೆಯ ಕೆಳಭಾಗವನ್ನು ಆವರಿಸುತ್ತವೆ. ಬಿಳಿನೊಣವು ಉತ್ಪಾದಿಸುವ ಮೇಣವು ಕೂಡ ಕಂಡುಬರುತ್ತದೆ. ಇದರ ನಿರ್ವಹಣೆಗೆ ಯಾವುದೇ ಕೀಟನಾಶಕಗಳ ಸಿಂಪರಣೆ ಮಾಡಬಾರದು. ಎಲೆಗಳ ಮೇಲೆ ಶೇಕಡ 1ರ ತಿಳಿಗಂಜಿ (ಮೈದಾ) ಸಿಂಪರಣೆ ಮಾಡುವುದರಿಂದ ಕಪ್ಪು ಶೀಲಿಂದ್ರ ಉದುರಿ ಹೋಗುತ್ತದೆ. ಕಾಂಡದ ಮೇಲೆ ಹಳದಿ, ಜಿಗುಟಾದ ಟ್ರ್ಯಾಪ್ ಅಳವಡಿಸುವುದು ತೆಂಗಿನ ನರ್ಸರಿಗಳಲ್ಲಿ ಮಾತ್ರ ಕೀಟನಾಶಕವಾದ ಇಮಿಡಾಕ್ಲೋಪ್ರಿಡ್ (0.005%) ನ್ನು ಸಿಂಪಡಿಸಬೇಕು. ಇದರಿಂದ ಕೀಟವು ಇತರ ಪ್ರದೇಶಗಳಿಗೆ ಹರಡುವುದನ್ನು ತಡೆಯಬಹುದು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ, ಕೋಲಾರದ ಉಪನಿರ್ದೇಶಕರಾದ ಶ್ರೀಮತಿ ಗಾಯತ್ರಿರವರು, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಸುಮಾರು 50 ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ), ಡಾ. ಜ್ಯೋತಿ ಕಟ್ಟೆಗೌಡರ, ವಿಜ್ಞಾನಿ (ತೋಟಗಾರಿಕೆ), ಕು. ಸ್ವಾತಿ ಜಿ.ಆರ್, ವಿಷಯ ತಜ್ಞರು (ಹವಾಮಾನ ಶಾಸ್ತ್ರ) ಇವರು ಪಾಲ್ಗೊಂಡಿದ್ದರು.