ಬೆಂಗಳೂರು, ನ.೨೫: ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನವೆಂಬರ್ 25 ರಂದು ಹಾಗೂ 26 ರಂದು ಕರಾವಳಿ ಶ್ರೀಮಂತ ಕ್ರೀಡೆ ಕಂಬಳ ಆಯೋಜಿಸಲಾಗಿದ್ದು, ʼಬೆಂಗಳೂರು ಕಂಬಳʼಕ್ಕೆ ಮೊದಲ ಕೆರೆ ಉದ್ಘಾಟನೆ ನಡೆದಿದೆ. ಇಂದು ಈ ಸಮಾರಂಭದಲ್ಲಿ ಪಾಲುಗೊಂಡ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶೇಷ ದೀಪ ಬೆಳಗಿಸಿ, ಗಂಗಾರಾತಿ ಮಾಡುವುದರ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ ಹಾಗೂ ಬೆಂಗಳೂರು ಕಂಬಳ ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕಂಬಳಕ್ಕೆ ಜನ ಸ್ತೋಮ ಸೇರಿಕೊಂಡಿದೆ.
ಇದಕ್ಕೂ ಮೊದಲು ರಾಜ ಮಹರಾಜ ಹೆಸರಿನ ಕಂಬಳ ಕೆರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವ, ದೇವರ ಪ್ರಸಾದ ಕಂಬಳ ಕೆರೆಯ ನೀರಿಗೆ ಅರ್ಪಣೆ ಮಾಡಿ, ಯಾವುದೇ ಅಡ್ಡಿ- ಆತಂಕ ಎದುರಾಗದಂತೆ ಪ್ರಾರ್ಥನೆ ಸಲ್ಲಿಸಿ, ದೀಪ ಬೆಳಗಿಸಿ ಕಾಯಿ ಒಡೆದರು. ಈ ಸಂದರ್ಭ ಮಾಜಿ ಮುಖ್ಯಮಂತ್ರಿ. ಬಿಎಸ್ ಯಡಿಯೂರಪ್ಪ, ಸಂಸದ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ. ಅಧ್ಯಕ್ಷ ಅಶೋಕ್ ಕುಮಾರ್. ರೈ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಗೊಂಡ ಮಹತ್ವದ ಓಟದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಭಾಗಿಯಾಗಲಿದ್ದಾರೆ.
ಈ ಕರಾವಳಿ ಕಂಬಳ ಉತ್ಸವಕ್ಕೆ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ನಟ ದರ್ಶನ್, ಕಾಂತಾರ ಹೀರೋ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಉಪೇಂದ್ರ, ಶಿವಣ್ಣ, ಆಶಿಶ್ ಬಲ್ಲಾಳ್, ವಿವೇಕ್ ಒಬೆರಾಯ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗುತ್ತಿದ್ದು, ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಕರಾವಳಿಯ ಸಮಸ್ತ ಸಮುದಾಯದವರು ಒಂದೆಡೆ ಒಗ್ಗಟ್ಟಾಗಿ ಸೇರುವ ಮೂಲಕ ರಾಜ್ಯದಲ್ಲಿ ನೂತನ ಪರಂಪರೆ ಆರಂಭವಾಗಲಿದೆ ಎಂದು ಹೇಳಬಹುದು.
ಇಂದಿನ ಬೆಂಗಳೂರು ಕಂಬಳದಲ್ಲಿ ಕರಾವಳಿಯ ವಿವಿಧ ಭಾಷೆ-ಜಾತಿಗಳ 50ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಿದ್ದು, ಈಗಾಗಲೇ ೧೮೦ ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಕಂಬಳ ತಂಡ ತಿಳಿಸಿದೆ.