

ಶ್ರೀನಿವಾಸಪುರ: ಸಹಕಾರ ಸಂಘ ರೈತ ಸಮುದಾಯದ ಸಮಸ್ಯೆಗಳಿಗೆ ಸಂದ್ಸಿಸಿ ಕಾರ್ಯನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ ಹೇಳಿದರು.
ತಾಲ್ಲೂಕಿನ ಮಣಿಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ಥಳೀಯ ವ್ಯವಸಾಯ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ ಅವರು, ಸಂಘ ಉಳಿಯಬೇಕಾದರೆ ಸಾಲ ವಸೂಲಾತಿ ಪ್ರಮಾಣ ನೂರಕ್ಕೆ ನೂರರಷ್ಟಿರಬೇಕು ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಸುರೇಶ್ ರೆಡ್ಡಿ ಮಾತನಾಡಿ, ಮಣಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘ ಸಾಲ ನೀಡಿಕೆ ಹಾಗೂ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ. 54 ಸ್ತ್ರೀ ಶಕ್ತಿ ಸಂಘಗಳಿಗೆ ರೂ.2.70 ಕೋಟಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಾಲ ಮರುಪಾವತಿ ತೃಪ್ತಿಕರವಾಗಿದೆ. ಸಂಘ ರೂ.4 ಲಕ್ಷ ಲಾಭದಲ್ಲಿದೆಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಉಪಾಧ್ಯಕ್ಷೆ ವೇದಾವತಿ, ನಿರ್ದೇಶಕರಾದ ಕೆ.ಲಕ್ಷ್ಮಣರೆಡ್ಡಿ, ಎಂ.ನರಸಿಂಹರೆಡ್ಡಿ, ಕೆ.ಎನ್.ನಾರಾಯಣಸ್ವಾಮಿ, ಟಿ.ವಿ.ಬೈರೆಡ್ಡಿ, ಎಂ.ಆಂಜಪ್ಪ, ಎನ್.ಶ್ರೀರಾಮರೆಡ್ಡಿ, ಚಿಕ್ಕರಾಮಪ್ಪ, ಸುಲ್ತಾನ್ಸಾಬಿ, ಚಲಪತಿ, ಯಶೋದಮ್ಮ, ಸಿಬ್ಬಂದಿ ಎಂ.ಎ.ನಾರಾಯಣರೆಡ್ಡಿ ಇದ್ದರು.