ಕೋಲಾರ: ಸರಕಾರಿ ಶಾಲೆ ಮಕ್ಕಳು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಾಧಕರಾಗಿ ಹೊರ ಹೊಮ್ಮಬೇಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಟಮಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದಿಂದ ಆಯೋಜಿಸಲಾಗಿದ್ದ ಸಾವಿತ್ರಿ ಬಾಫುಲೆ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕಿಯರನ್ನು ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳು ಸಿಗುತ್ತಿವೆ, ಸಾವಿತ್ರಿ ಬಾಪುಲೆ ರೀತಿಯಲ್ಲಿಯೇ ಜ್ಞಾನವಂತ ಶಿಕ್ಷಕ ವರ್ಗ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಬದುಕಿನ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯ, ಮಾನವೀಯ ಮೌಲ್ಯಗಳು, ಕೌಟುಂಬಿಕ ಪ್ರೀತಿ, ಗುರುಹಿರಿಯರಿಗೆ ಗೌರವ ಕೊಡಬೇಕೆಂಬ ನೀತಿ ಕಲಿಯಲು ಸಾಧ್ಯ ಎಂದರು.
ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿರುವೆಡೆ ಸೌಲಭ್ಯಗಳಿಲ್ಲ, ಸೌಲಭ್ಯಗಳಿದ್ದೆಡೆ ಶಿಕ್ಷಕರಿಲ್ಲ ಎಂಬ ವಾತಾವರಣ ಇದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಸರಕಾರಗಳು ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದ ಅವರು, ಟಮಕ ಶಾಲೆಯಲ್ಲಿ ಉತ್ತರ ಭಾರತದ ರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಕಲಿಯುತ್ತಿರುವುದು ಶ್ಲಾಘನೀಯ, ರೋಟರಿ ಸೆಂಟ್ರಲ್ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಶೀಘ್ರವೇ ನೋಟ್ ಪುಸ್ತಕಗಳ ವಿತರಿಸಲಾಗುವುದು ಎಂದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಸಾವಿತ್ರಿ ಬಾಪುಲೆ ಶೋಷಿತ ವರ್ಗದವರಿಗೆ ಹಾಗೂ ಮಹಿಳೆಯರಿಗೆ ವಿದ್ಯೆ ಎಂಬ ಬೆಳಕು ನೀಡಿದ ಮಹಾಮಾತೆಯಾಗಿದ್ದಾರೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರತಿ ಶಾಲೆಯಲ್ಲಿ ಸೇವಾದಳ ಘಟಕ ಆರಂಭಿಸಬೇಕು, ಟಮಕ ಶಾಲೆಯಲ್ಲಿಯೂ ಸೇವಾದಳ ಘಟಕ ಆರಂಭವಾಗಿ ಮಕ್ಕಳಿಗೆ ದೇಶಪ್ರೇಮ, ರಾಷ್ಟ್ರಧ್ವಜ ಮಾಹಿತಿ, ರಾಷ್ಟ್ರಗೀತೆ ಗಾಯನ ತರಬೇತಿ, ಶಿಸ್ತು ಸಿಗುವಂತಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಟಮಕ ಸರಕಾರಿ ಶಾಲೆಯಲ್ಲಿ ದೀರ್ಘ ಅವಯಿಂದ ಸೇವೆ ಸಲ್ಲಿಸುತ್ತಿರುವ ಕೆ.ಎನ್.ಹೇಮಾವತಿ ಹಾಗೂ ಎಚ್.ಎಂ.ಮಂಜುಳ ಅವರನ್ನು ಸಾವಿತ್ರಿಬಾಪುಲೆ ನೆನಪಿನಲ್ಲಿ ಸನ್ಮಾನಿಸಲಾಯಿತು.
ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಕೆ.ಜಯದೇವ್ ಹಾಗೂ ಸಿ.ಎಂ.ಆರ್.ಶ್ರೀನಾಥ್ರಿಂದ ಶಾಲಾ ಮಕ್ಕಳಿಗೆ ಬಿಸ್ಕೆಟ್ ಹಾಗೂ ಚಾಕ್ಲೇಟ್ಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಸಿ.ವಿ.ನಾಗರಾಜ್ ಸ್ವಾಗತಿಸಿದರು. ಶಿಕ್ಷಕಿ ಕೆ.ವಿ.ಮಾಲಿನಿ ನಿರೂಪಿಸಿದರು. ಸೇವಾದಳ ಸಂಘಟಕ ಎಂ.ಬಿ.ದಾನೇಶ್ ವಂದಿಸಿದರು.
ಶಾಲಾ ಶಿಕ್ಷಕವರ್ಗದ ಎಂ.ಚಂದ್ರಮೌಳಿ, ಕೆ.ಆರ್.ತ್ರಿವೇಣಿ, ಆಯಾ ಗೌರಮ್ಮ, ಅಡುಗೆ ಕೆಲಸದವರಾದ ಕೆ.ಎಂ.ಸರಸ್ವತಮ್ಮ, ಕಲಾವತಿ, ಎ.ಸೌಜನ್ಯ ಇತರರು ಹಾಜರಿದ್ದರು.