

ಮಂಗಳೂರು;ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್, ಬಜ್ಜೋಡಿ ಇವರ ಸಹಯೋಗದಲ್ಲಿ ಬಜ್ಜೋಡಿಯ ಇನ್ಫೆಟ್ ಮೇರಿ ಚರ್ಚ್ ಸಭಾಂಗಣದಲ್ಲಿ ʼಮಾಣ್ಕಾಂ-ಮೊತಿಯಾಂʼ ಶೀರ್ಷಿಕೆಯಡಿ ಎಪ್ರಿಲ್ 21ರಿಂದ 23ರವರೆಗೆ, 3 ದಿನ ಮಕ್ಕಳ ರಜಾ ಶಿಬಿರವನ್ನು ಹಮ್ಮಿಕೊಂಡಿತ್ತು. ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶ್ರೀ ರೋಯ್ ಕ್ಯಾಸ್ತೆಲಿನೊರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ನಮ್ಮ ಕೊಂಕಣಿ ಭಾಷೆಯು ರಾಷ್ಟದ 22 ಅಧಿಕೃತ ಭಾಷೆಗಳಲ್ಲಿ ಒಂದು. ನಾವು ಕೊಂಕಣಿ ಭಾಷೆ ಮಾತನಾಡಿದ್ದರಿಂದ ಕೊಂಕಣಿ ಭಾಷೆಯು ಉಳಿದಿದೆ. ಕೊಂಕಣಿ ಅಕಾಡೆಮಿಯು ಕೊಂಕಣಿ ಭಾಷೆಯನ್ನು ಉಳಿಸಲು ಹಲವಾರು ಕಾರ್ಯಕ್ರಮದ ಮೂಲಕ ಪ್ರಯತ್ನಿಸುತ್ತಿದೆ. ಅಕಾಡೆಮಿಯು ಆಯೋಜಿಸಿದ ಈ ಕಾರ್ಯಕ್ರಮವು ಮಕ್ಕಳಿಗೆ ವಿವಿಧ ವಿಚಾರಗಳನ್ನು ಕಲಿಸಿದೆ. ಇಂತಹ ಶಿಬಿರಗಳಿಂದ ಕೊಂಕಣಿ ಭಾಷೆಯನ್ನು ಮಕ್ಕಳು ಕಲಿಯುವ ಮೂಲಕ ಅವರ ಸಮಗ್ರ ಅಭಿವೃದ್ದಿಯಾಗಲಿ, ಮಕ್ಕಳು ಮುಂದೆ ಬರಲು ಶಿಬಿರವು ಪ್ರೇರಣೆಯಾಗಲಿ ಎಂದು ಹೇಳಿದರು. ಗೌರವ ಅತಿಥಿಗಳಾಗಿ ಇನ್ಫೆಂಟ್ ಜೀಸಸ್ ಶ್ರೈನಿನ ರೆಕ್ಟರ್ ಆದ ವಂದನೀಯ ಮೆಲ್ವಿನ್ ಡಿಕುನ್ಹಾ, ಬಜ್ಜೋಡಿ ಚರ್ಚ್ ನ ಧರ್ಮಗುರುಗಳಾದ ವಂ.ದೊಮಿನಿಕ್ ವಾಸ್, ಬಜ್ಜೋಡಿ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಜಾನೆಟ್ ಡಿಸೋಜ, ಶಿಬಿರದ ಸಂಚಾಲಕರಾದ ಅರುಣ್ ರಾಜ್ ರೊಡ್ರಿಗಸ್, ಅಕಾಡೆಮಿಯ ಸದಸ್ಯ ಸಂಚಾಲಕರಾದ ನವೀನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷರು ಅಧ್ಯಕ್ಷೀಯ ಭಾಷಣದಲ್ಲಿ, ಅಕಾಡೆಮಿಯು ಮುಂದೆಯೂ ಕೂಡ ಇಂತಹ ಶಿಬಿರಗಳನ್ನು ಆಯೋಜಿಸಲು ತಯಾರಿದೆ. ಆದುದರಿಂದ ಎಲ್ಲಾ ಸಮುದಾಯದ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕೊಂಕಣಿ ಭಾಷೆ ಮತ್ತು ಗುಮಟ್ ಗೆ ಬಹಳ ಹತ್ತಿರದ ಸಂಬಂಧವಿದೆ. ಗುಮಟ್ ಹಾಗೂ ಹೊಸ ವಿಷಯದ ಬಗ್ಗೆ ಮಕ್ಕಳಿಗೆ ಈ ಶಿಬಿರದಲ್ಲಿ ಕಲಿಯಲು ಅವಕಾಶ ಸಿಕ್ಕಿದೆ ಎಂದು ಹೇಳಿ, ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರನ್ನು ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ಮೊದಲಿಗೆ ಶಿಬಿರಾರ್ಥಿಗಳು ಸಂಗೀತ, ನಾಟಕ, ನೃತ್ಯವನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು ಮತ್ತು ತಾವು ಶಿಬಿರದಲ್ಲಿ ಕಲಿತ ವಿಷಯಗಳನ್ನು ತಮ್ಮ ಅನಿಸಿಕೆಯಲ್ಲಿ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ಹಂಚಲಾಯಿತು. ಬಜ್ಜೋಡಿ ಚರ್ಚ್ ನ ಧರ್ಮಗುರುಗಳಾದ ವಂ|ದೊಮಿನಿಕ್ ವಾಸ್ ರವರು ಸ್ವಾಗತಿಸಿ, ಶಿಬಿರಾರ್ಥಿಯಾದ ರಿಯಾನ್ ಪಿಂಟೊರವರು ವಂದಿಸಿದರು. ಶಿಬಿರಾರ್ಥಿಗಳಾದ ಸಮೈರಾ ಫೆರ್ನಾಂಡಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

