ವಾತಾವರಣ ತಾಪಮಾನ ಏರಿಕೆ ತಡೆಗೆ ಹಸಿರೀಕರಣವೇ ಪರಿಹಾರ – ಡಿ. ಎಫ್. ಓ. ರೆಡ್ಡಿ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ವಾತಾವರಣದ ತಾಪಮಾನ ಏರಿಕೆ ಇಂದು ಜಗತ್ತಿನ ಅತಿ ದೊಡ್ಡ ಗಂಡಾಂತರ. ಈಗಾಗಲೇ ತಾಪಮಾನ 1.1 ಡಿಗ್ರಿ ಏರಿಕೆಯಾಗಿದೆ ಎಂದು ಹವಾಮಾನ ತಜ್ಞರ ವರದಿ ತಿಳಿಸಿದೆ. ಬಿಸಿಗಾಳಿ ಮತ್ತು ಅಂತರ್ಜಲ ಕುಸಿಯುವ ದುಷ್ಪರಿಣಾಮ ಎದುರಾಗಿದೆ. ಗಿಡ – ಮರ ಬೆಳೆಸಿ, ಪ್ರಕೃತಿಯನ್ನು ಗೌರವಿಸುವುದರಿಂದಷ್ಟೇ ಇದನ್ನು ತಡೆಯಬಹುದು. ಭೂಮಿ ಮೇಲೆ ಹಸಿರು ಜಾಸ್ತಿಯಾದಂತೆ ವಾತಾವರಣದ ವಿಷಕಾರಿ ಕಾರ್ಬನ್ ಅಂಶ ಕಡಿಮೆಯಾಗುತ್ತದೆ. ನಾವಿಂದು ಪ್ರಕೃತಿಯನ್ನು ಸಂರಕ್ಷಿಸುವುದರಿಂದ ನಮ್ಮ ಆರೋಗ್ಯ ಸುಧಾರಿಸುವುದಲ್ಲದೆ ಮುಂದಿನ ಪೀಳಿಗೆಗೆ ಒಂದು ದೊಡ್ಡ ಬಳುವಳಿ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕೋಟಿಲಿಂಗೇಶ್ವರ ದೇವಳ ಸಮಿತಿಯವರು ದೇವಳ ವಠಾರದ ಸುತ್ತ ಗಿಡ ಬೆಳೆಸುವ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹೇಳಿದರು.
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯ ಆಡಳಿತ ಸಮಿತಿಯವರ ಹಸಿರು ದೇವಳ ಯೋಜನೆಯನ್ವಯ ನಾಲ್ಕೂವರೆ ಎಕರೆ ವಿಸ್ತಾರದ ಕೋಟಿತೀರ್ಥ ಸರೋವರದ ದಡದಲ್ಲಿ ಬಿಲ್ವಪತ್ರೆ ಗಿಡ ನೆಟ್ಟು ಅವರು ಮಾತನಾಡಿದರು.
ಯಾವುದೇ ಗಿಡವಾದರೂ ಅದು ಮಗುವಿನಂತೆ. ಮೂರ್ನಾಲ್ಕು ವರ್ಷ ಚೆನ್ನಾಗಿ ಪಾಲನೆ ಪೋಷಣೆ ಮಾಡಬೇಕು. ಇಂತಹ ಜನೋಪಯೋಗಿ ಯೋಜನೆಗಳಿಗೆ ಅರಣ್ಯ ಇಲಾಖೆ ಸದಾ ಸಹಕಾರ ನೀಡುತ್ತದೆ. ವಿವಿಧ ಜಾತಿಯ ಗಿಡಗಳು ಇಲಾಖೆಯ ನರ್ಸರಿಗಳಲ್ಲಿ ಲಭ್ಯವಿದ್ದು ಅವನ್ನು ಪಡೆದುಕೊಳ್ಳಬಹುದು. ಹಾಗೆಯೇ, ಒಳ್ಳೆಯ ಪರಿಸರವನ್ನು ಹೊಂದಿರುವ ಶ್ರೀ ಕೋಟಿಲಿಂಗೇಶ್ವರ ದೇವಾಲಯವನ್ನು ಧಾರ್ಮಿಕ ಪ್ರವಾಸಿ ಕೇಂದ್ರವಾಗಿಯೂ ಬೆಳೆಸಲು ಅವಕಾಶವಿದೆ. ಈ ಬಗ್ಗೆ ಪ್ರಸ್ತಾವನೆ ಬಂದರೆ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತದೆ ಎಂದೂ ಅವರು ಭರವಸೆ ನೀಡಿದರು.
ದೇವಾಲಯದ ಹೊರ ಪ್ರಾಕಾರದಲ್ಲಿ ಇರಿಸಲಾದ ಶಿಲಾ ಶಾಸನಗಳನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ ಆಶೀಶ್ ರೆಡ್ಡಿಯವರು, ಶಾಸನಗಳನ್ನು ಸಂರಕ್ಷಿಸಬೇಕು. ಅವು ನಮ್ಮ ರಾಜ ಮಹಾರಾಜರುಗಳು, ದೇವಾಲಯಗಳು ಮತ್ತು ಪ್ರಾಚೀನ ಸಾಮಾಜಿಕ ಪದ್ಧತಿಗಳನ್ನು ವಿವರಿಸುವ ಅಮೂಲ್ಯ ದಾಖಲೆಗಳು. ಅವುಗಳು ಕಳ್ಳರ ಪಾಲಾಗದಂತೆ, ನಶಿಸದಂತೆ ಸಂರಕ್ಷಿಸಬೇಕು ಎಂದೂ ಸಲಹೆ ನೀಡಿದರು.
ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಗಿಡಗಳನ್ನು ನೆಟ್ಟರು.
ದೇವಳ ಆಡಳಿತ ಸಮಿತಿಯ ಸದಸ್ಯ ಸುರೇಶ್ ಶೇರಿಗಾರ್ ಮಾತನಾಡಿ ನಾಲ್ಕೂವರೆ ಎಕರೆಯಷ್ಟು ವಿಸ್ತಾರ ಹೊಂದಿರುವ ಕೋಟಿತೀರ್ಥ ಸರೋವರವು ಈ ಪ್ರದೇಶದ ಅತಿ ದೊಡ್ಡ ಜಲಾಗಾರ. ಇದರ ಸುತ್ತಲೂ ಪಾದಚಾರಿ ಮಾರ್ಗ ರಚಿಸಿ, ವಿದ್ಯುತ್ ದೀಪಗಳು, ಸಿ ಸಿ ಕ್ಯಾಮೆರಾ, ಆಸನ ವ್ಯವಸ್ಥೆಗಳನ್ನು ಅಳವಡಿಸಿ ಸುಂದರಗೊಳಿಸಲಾಗುವುದು. ಬಿಲ್ವಪತ್ರೆ, ನುಕ್ಕಿ ಇನ್ನಿತರ ಹೂ ಗಿಡ – ಮರಗಳನ್ನು ಬೆಳೆಸಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಂದಿನ ಯೋಜನೆಗಳನ್ನು ವಿವರಿಸಿದರು.
ಹಸಿರು ದೇವಳ ಯೋಜನೆಯ ಭಾಗೀದಾರ ಸಂಸ್ಥೆ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಡಿ. ಎಫ್. ಓ. ಆಶೀಶ್ ರೆಡ್ಡಿಯವರಿಗೆ ಶಾಲು ಹೊದೆಸಿ, ದೇವರ ಪ್ರಸಾದ, ಸ್ಮರಣಿಕೆ ನೀಡಿ ಗೌರವಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೊಣಿ ಕೃಷ್ಣದೇವ ಕಾರಂತ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೇದಮೂರ್ತಿ ತಂತ್ರಿ ಪ್ರಸನ್ನ ಕುಮಾರ್ ಐತಾಳ, ಮಂಜುನಾಥ ಆಚಾರ್ಯ, ಚಂದ್ರಿಕಾ ಧನ್ಯ, ಶಾರದಾ, ಭಾರತಿ, ಮಾಜಿ ಸದಸ್ಯ ಬಿ. ಎಂ. ಗುರುರಾಜ ರಾವ್ ಹಾಗೂ ಭಕ್ತ ಸಮೂಹದವರು ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ವಂದಿಸಿದರು.