ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ ನವೆಂಬರ್ 29 : ಕೋಲಾರ ಜಿಲ್ಲೆಯಾದ್ಯಂತ ಸರ್ಕಾರಿ ಕೆರೆ ಗೋಕುಂಟೆ, ರಾಜಕಾಲುವೆ, ಗುಂಡುತೋಪು, ಗೋಮಾಳ ಜಮೀನುಗಳ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಹಾಗೂ ಕೋಲಾರ ನಗರದಲ್ಲಿ ಮಳೆಯಿಂದ ಹಾಳಾಗಿರುವ ಪ್ರಮುಖ ರಸ್ತೆಗಳನ್ನು ಮತ್ತು ಒಡೆದು ಹೋಗಿರುವ ಗಾಂಧಿನಗರದ ಹತ್ತಿರದ ಕೋಡಿ ಮೇಲುಸೇತುವೆಯನ್ನು ಹೊಸದಾಗಿ ನಿರ್ಮಿಸುವಂತೆ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಿ.ಆರ್.ಪಿ.ವೆಂಕಟೇಶ್ ಮತ್ತು ಉಪಾಧ್ಯಕ್ಷ ಮಾಲೂರು ಮಂಜುನಾಥ್ ರವರ ನೇತೃತ್ವದ ನಿಯೋಗವು ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಆರ್.ಪಿ. ವೆಂಕಟೇಶ್ ಮುಳಬಾಗಿಲು ತಾಲ್ಲೂಕು ವಿರೂಪಾಕ್ಷ ಗ್ರಾಮದ ಸರ್ವೇ ನಂ.28 4 ಎಕರೆ 14 ಗುಂಟೆ ಮತ್ತು 30ರಲ್ಲಿ 0.36 ಗುಂಟೆಯ ಸನ್ಯಾಸಿ ತೋಪು, ಅಮರಾಯಿ ತೋಪು ಎಂದು ಕರೆಯಲ್ಪಡುವ ಸರ್ಕಾರಿ ಗುಂಡುತೋಪಿನ ಜಾಗವನ್ನು ಬೆಂಗಳೂರಿನ ಬೆಲ್ಡರ್‍ಗಳು ಅಕ್ರಮವಾಗಿ ಒತ್ತುವರಿ ಮತ್ತು ಕಬ್ಜ ಮಾಡಿಕೊಂಡು ಸುತ್ತಲೂ ತಂತಿ ಬೇಲಿಯನ್ನು ನಿರ್ಮಿಸಿರುತ್ತಾರೆ.
ಕೋಲಾರದ ಅಮಾನಿಕೆರೆ, ಕೋಡಿಕಣ್ಣೂರು ಕೆರೆಯ ನೀರು ಮುಳುಗಡೆ ಪ್ರದೇಶ ಹಾಗೂ ರಾಜಕಾಲುವೆಗಳನ್ನು ಭೂಗಳ್ಳ ಮಾಫೀಯಾಗಳವರು ಅಕ್ರಮವಾಗಿ ಕೆರೆಯ ನೀರು ಮುಳುಗಡೆ ಪ್ರದೇಶವನ್ನು ಕಬ್ಜಾ ಮಾಡಿಕೊಂಡು, ಕೆಲವರು ಸಂಬಂಧಪಡದ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮನೆಗಳನ್ನು, ವಾಣಿಜ್ಯ ಕಟ್ಟಡಗಳನ್ನು, ಇಟ್ಟಿಗೆ ಕಾರ್ಖಾನೆಗಳನ್ನು ಹಾಗೂ ಇತರೆ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇದೇ ರೀತಿ ಕೋಲಾರ ಜಿಲ್ಲೆಯಾದ್ಯಂತ ಇರುವಂತಹ ಸರ್ಕಾರಿ ಕೆರೆಗಳನ್ನು, ಗೋಕುಂಟೆಗಳನ್ನು, ಗುಂಡುತೋಪುಗಳನ್ನು, ಗೋಮಾಳಗಳನ್ನು, ರಾಜಕಾಲುವೆಳಗಳನ್ನು ಅನೇಕ ಕಡೆಗಳಲ್ಲಿ ಒತ್ತುವರಿ ಮತ್ತು ಕಬ್ಜಾ ಮಾಡಲಾಗಿದ್ದು, ಇವುಗಳನ್ನು ಸ್ಥಳ ಪರಿಶೀಲನೆ ನಡೆಸಿ ಸರ್ವೇ ನಡೆಸಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿರುತ್ತಾರೆ.
ಮಾಲೂರು ಎಂ.ಎನ್.ಮಂಜುನಾಥ್ ಮಾತನಾಡಿ ಇತ್ತೀಚಿನ ಚಂಡಮಾರುತದ ಮಳೆ ಪರಿಣಾಮವಾಗಿ ಕೋಲಾರ ಅನೇಕ ಪ್ರಮುಖ ರಸ್ತೆಗಳು ಗುಂಡಿಗಳ ಮಯವಾಗಿದ್ದು, ಸುಗಮ ವಾಹನ ಹಾಗೂ ಜನ ಸಂಚಾರಕ್ಕೆ ತುಂಬಾ ಅನಾನುಕೂಲವಾಗಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಅಪಘಾತಗಳಿಗೆ ಎಡೆ ಮಾಡಿಕೊಟ್ಟು ಪ್ರಾಣ ಹಾನಿಯಾಗುವ ಸಂಭವವು ಹೆಚ್ಚು ಇರುತ್ತದೆ.
ಕೋಲಾರ ಅಮಾನಿಕೆರೆಯ ಗಾಂಧಿನಗರದ ಬಳಿ ಇರುವ ಕೆರೆ ಕೋಡಿಯು ಅತೀ ಪ್ರಾಚೀನ ಮೇಲು ಸೇತುವೆಯಾಗಿದ್ದು, ಇದು ಕೆಲವು ದಿನಗಳ ಹಿಂದೆ ಕೋಡಿ ಹೋಗುವ ನೀರಿನ ರಭಸದ ಪರಿಣಾಮವಾಗಿ ಇದರ ಕೆಲವು ತಡೆಗೋಡೆಗಳು ಒಡೆದು ಹೋಗಿದ್ದು, ಸೇತುವೆಯು ಶಿಥಿಲಾವ್ಯವಸ್ಥೆಯನ್ನು ತಲುಪಿ ಬಿದ್ದು ಹೋಗುವ ಹಂತವನ್ನು ತಲುಪಿರುತ್ತದೆ. ಇವುಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು ಮತ್ತು ಮೇಲ್ಸೇತುವೆಯನ್ನು ಹೊಸದಾಗಿ ನಿರ್ಮಿಸಿ ಮುಂದೆ ಆಗಬಹುದಾದಂತಹ ಆಸ್ತಿಪಾಸ್ತಿ ನಷ್ಠ ಮತ್ತು ಪ್ರಾಣ ಹಾನಿಯನ್ನು ತಪ್ಪಿಸಬೇಕೆಂದು ಕೋರಿರುತ್ತಾರೆ.
ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂಧಿಸಿ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಅಲ್ಲಿಂದ ಅನುದಾನಗಳು ಬಂದ ತಕ್ಷಣ ದುರಸ್ತಿ ಕಾಮಗಾರಿಗಳನ್ನು ಮಳೆ ಮುಗಿದ ನಂತರ ಪ್ರಾರಂಭಿಸುವುದಾಗಿ ಮತ್ತು ಹಂತಹಂತವಾಗಿ ಜಿಲ್ಲೆಯಾದ್ಯಂತ ಸರ್ಕಾರಿ ಜಮೀನುಗಳ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
ನಿಯೋಗದಲ್ಲಿ ಮಾಲೂರಿನ ಪ್ರೇಮ್, ಯಶವಂತ್, ಕೋಲಾರದ ಕೀಲುಕೋಟೆ ಆಂಜನಪ್ಪ, ಬಾಲಕುಮಾರ್, ಮೇಸ್ತ್ರಿ ಸೊಣ್ಣಪ್ಪ, ಚಿಕ್ಕಮುನಿಯಪ್ಪ, ನವೀನ್, ಹನುಮಂತ, ಮುನಿಯಪ್ಪ, ರಾಜಣ್ಣ ಹಾಗೂ ಇತರರು ಇದ್ದರು.