ಕೋಲಾರ/04 ಮೇ : ಕೋಲಾರ ನಗರದ ಗೌರಿಪೇಟೆಯ ಮೂರನೇ ಕ್ರಾಸ್ ಸಿ.ಎಂ.ಸಿ. ಕಾಂಪೌಂಡ್ನಲ್ಲಿ ಸುಮಾರು ಇಪ್ಪತ್ತು ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆರ್.ಮಂಜುನಾಥ್ ಮತ್ತು ಆರ್.ವೆಂಕಟಾಚಲಪತಿ ಎಂಬುವರು ದೌರ್ಜನ್ಯದಿಂದ ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿಕೊಂಡು ಆ ಸ್ಥಳದಲ್ಲಿ ಮನೆಗಳಿಗೆ ಹೋಗುವ ರಸ್ತೆಯನ್ನು ಮುಚ್ಚಿ ಗೋಡೆ ನಿರ್ಮಾಣ ಮಾಡಿ ಓಡಾಡಲು ತೊಂದರೆ ನೀಡಿದ್ದರು.
ಈ ವಿಚಾರವಾಗಿ ಸಿ.ಎಂ.ಸಿ. ಕಾಂಪೌಂಡಿನ ವಾಸಿ ಕೆ.ಆರ್.ಶೋಭ ರವರು ಕೋಲಾರ ನಗರಸಭೆಯ ಪೌರಾಯುಕ್ತರಿಗೆ ದೂರು ಅರ್ಜಿ ನೀಡಿ ರಸ್ತೆ ಒತ್ತುವರಿ ಮಾಡಿಕೊಂಡಿರುವ ಮತ್ತು ಓಡಾಡಲು ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಗೋಡೆಯನ್ನು ತೆರವುಗೊಳಿಸಲು ಮನವಿ ಮಾಡಿದ್ದರು. ಪೌರಾಯುಕ್ತ ಶಿವಾನಂದ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಒತ್ತುವರಿಯನ್ನು ಖಚಿತಪಡಿಸಿಕೊಂಡು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ, ಅವರು ನೀಡಿದ ಪತ್ರಗಳನ್ನು ಪರಿಶೀಲನೆ ಮಾಡಿ ನಂತರ ಒತ್ತುವರಿ ಸ್ಥಳವನ್ನು ಮೇ.3ರಂದು ಜೆಸಿಬಿ ಮುಖಾಂತರ ತೆರವುಗೊಳಿಸಿ ಸಿ.ಎಂ.ಸಿ. ಕಾಂಪೌಂಡ್ ನಿವಾಸಿಗಳಿಗೆ ಓಡಾಡಲು ರಸ್ತೆ ಅನುಕೂಲ ಮಾಡಿಕೊಟ್ಟರು.
ರಸ್ತೆಯ ಒತ್ತುವರಿಯನ್ನು ತೆರವು ಮಾಡಿದ ನಗರಸಭೆಯ ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗದವರಿಗೆ ಸಿ.ಎಂ.ಸಿ. ಕಾಂಪೌಂಡ್ನ ನಿವಾಸಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.