ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪೌರ ಸೇವಾ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ರಾಜ್ಯ ಪೌರ ಸೇವಾ ಕಾರ್ಮಿಕರ ಸಂಘದ ಸಲಹೆಗಾರ ಎನ್.ವೆಂಕಟೇಶಪ್ಪ ಹೇಳಿದರು.
ಪಟ್ಟಣದ ಪುರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ಕಾರ್ಮಿಕರ ಸಂಘದ ಸ್ಥಳೀಯ ಶಾಖಾ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೌರ ಸೇವಾ ಕಾರ್ಮಿಕರು ಹಲವು ಸಮಸ್ಯೆಗಳ ಸುಳಿಗೆ ಸಿಕ್ಕಿ ನಲುಗುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ಕಾರ್ಮಿಕರನ್ನು ಖಾಯಂ ಮಾಡಿದಂತೆ, ಸ್ಥಳೀಯ ಪೌರ ಸೇವಾ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಸರ್ಕಾರದ ಎಲ್ಲ ಸೌಲಭ್ಯ ಸಿಗುವಂತೆ ಮಾಡಬೇಕು. ಇದಕ್ಕೆ ಖಾಯಂ ನೌಕರರು ಸಹಕರಿಸಬೇಕು. ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರು ಸಾಂಘಿಕ ಪ್ರಯತ್ನ ನಡೆಸಿದಾಗ ಮಾತ್ರ ಸಮಸ್ಯೆ ಈಡೇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪುರಸಭೆಯ ಪರಿಸರ ಅಭಿಯಂತರ ಡಿ.ಶೇಖರ್ ರೆಡ್ಡಿ ಮಾತನಾಡಿ, ಖಾಯಂ ಹಾಗೂ ದಿನಗೂಲಿ ನೌಕರರ ಮಧ್ಯೆ ಯಾವುದೇ ತಾರತಮ್ಯ ಮಾಡಲಾಗುತ್ತಿಲ್ಲ. ನಿಯಮಾನುಸಾರ ದೊರೆಯುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವರ ನ್ಯಾಯಯುತ ಬೇಡಿಕೆಗಳು ಈಡೇರಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಪೌರ ಸೇವಾ ನೌಕರರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವೆಂಕಟೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆಂಜಪ್ಪ, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಮುನಿವೆಂಕಟಪ್ಪ, ಬಾಲಕೃಷ್ಣ, ಜಿ.ವೆಂಕಟಾಚಲಪತಿ, ಗಂಗಾಧರ್, ಟಿ.ವಿ.ಸುರೇಶ್ ಕುಮಾರ್, ಕೃಷ್ಣಪ್ಪ, ವಿ.ಮಂಜುನಾಥ್, ಕೆ.ವಿ.ರವೀಂದ್ರ, ಬೈರೆಡ್ಡಿ, ಎನ್.ಶಂಕರ್, ನಾಗೇಶ್, ಸತೀಶ್, ಶಿವಕುಮಾರ್, ಪ್ರತಾಪ್, ಮಮತ, ಶಾರದ, ಶಾಸ್ತ್ರಿ ಇದ್ದರು.