ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕೋವಿಡ್ ಮಾರಿಯನ್ನು ತಡೆಯಲು ನಾಗರಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸೊಮವಾರ ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕೊರೊನಾ ಲಸಿಕೆ ಮೇಳ ಉದ್ಘಾಟಿಸಿ ಮಾತನಾಡಿ, ಕೆಲವರು ಮೂಢನಂಬಿಕೆ ಹಾಗೂ ಅಪಪ್ರಚಾರದಿಂದಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅದು ಸರಿಯಲ್ಲ. ಲಸಿಕೆಯಿಂದ ಯಾವುದೇ ಪ್ರತಿ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ದೇಹದಲ್ಲಿ ರೋಗ ತಡೆಯುವ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಪಟ್ಟಣದಲ್ಲಿ ಲಸಿಕೆ ಪಡೆಯಲು ಯೋಗ್ಯರಾದ 23 ಸಾವಿರ ಮಂದಿಯಿದ್ದಾರೆ. ಆ ಪೈಕಿ ಈವರೆಗೆ 13 ಸಾವಿರ ಮಂದಿ ಲಸಿಕೆ ಪಡೆದಿದ್ದಾರೆ. 10 ಸಾವಿರ ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಾಗಿದೆ. 18 ವರ್ಷ ಮೇಲ್ಪಟ್ಟ ಅರ್ಹ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುವುದು. ಸ್ವಯಂ ಪ್ರೇರಣೆಯಿಂದ ನಿಗದಿತ ಸ್ಥಳದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್, ಪರಿಸರ ಅಭಿಯಂತರ ಡಿ.ಶೇಖರ್ ರೆಡ್ಡಿ, ಟಿ.ನಾಗಲಕ್ಷ್ಮಿ, ಹಸ್ಮಾ, ಆಂಜಮ್ಮ, ಶಿವು, ಜಿ.ಆನಂದ್, ಅಮರೇಶ್ ಇದ್ದರು.