ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುವ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಜವಾಬ್ದಾರಿಯಾಗಬೇಕು :ಎನ್.ಎಸ್. ಪ್ರವೀಣ್‍ಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಸೆ.7: ನಗರದ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುವ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರಗಳ ಆಯೋಜನೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ನಗರಸಭೆ ಉಪಾಧ್ಯಕ್ಷ ಎನ್.ಎಸ್. ಪ್ರವೀಣ್‍ಗೌಡ ಅವರು ಹೇಳಿದರು.
ನಗರದ ಅಂತರಗಂಗೆ ರಸ್ತೆಯ ಆರ್ ಎಲ್ ಜಾಲಪ್ಪ ಆಸ್ಪತ್ರೆ ಆವರಣದಲ್ಲಿ ಕೋಲಾರ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರ ಕಾರ್ಮಿಕರರು ಆರೋಗ್ಯವಾಗಿದ್ದಾಗ ಮಾತ್ರ ನಗರಸಭೆ ವ್ಯಾಪ್ತಿಯ ನಿವಾಸಿಗಳು ಆರೋಗ್ಯವಂತ ಜೀವನ ಸಾಗಿಸಲು ಸಾಧ್ಯವಾಗಿರುತ್ತದೆ ಎಂದರು.
ಪೌರ ಕಾರ್ಮಿಕರರು ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಜನರ ಉತ್ತಮ ಜೀವನಕ್ಕೆ ಪೌರಕಾರ್ಮಿಕರರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಪೌರ ಕಾರ್ಮಿಕರಿಗೆ ಆಯೋಜನೆ ಮಾಡುವ ಆರೋಗ್ಯ ಶಿಬಿರಗಳನ್ನು ಕಡ್ಡಾಯವಾಗಿ ಭಾಗವಹಿಸಿ ನಿಮ್ಮ ಆರೋಗ್ಯ ಶಿಬಿರಗಳ ಸುದುಪಯೋಗಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರಲ್ಲದೆ ದುಶ್ಚಟಗಳಿಂದ ದೂರ ಉಳಿದು ನಗರದ ಸ್ವಚ್ಛತೆ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿ ಯಾವುದೇ ಕಾರಣಕ್ಕೂ ಸಹ ಪೌರ ಕಾರ್ಮಿಕರು ರಕ್ಷಣೆಯ ಪರಿಕರಣಗಳು ಇಲ್ಲದೆ ಬರಿ ಗೈನಲ್ಲಿ ತ್ಯಾಜ್ಯವನ್ನು ಮುಟ್ಟುವ ಕಾರ್ಯದಲ್ಲಿ ತೊಡಗಿ ಸಾಂಕ್ರಾಮಿಕ ರೋಗಗಳ ಭೀತಿಗೆ ಬಲಿಯಾಗಬೇಡಿ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಪ್ರಸಾದ್ ಮಾತನಾಡಿ, ಸೆ.23 ರಂದು ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಗರಸಭೆಯ ಪಿಕೆ ಹಾಗೂ ಜಲಗಾರರಿಗೆ ಸೆ.7 ಮತ್ತು 8 ರಂದು ಎರಡು ದಿನಗಳ ಕಾಲ ಪಿಕೆ ( ಪೌರ ಕಾರ್ಮಿಕರ) ಹಾಗೂ ಜಲಗಾರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ನಗರಸಭೆ ಸದಸ್ಯ ರಫಿ, ಡಾ. ಶೀಲಾ, ಡಾ.ದಿನೇಶ್, ನಗರಸಭೆಯ ತ್ಯಾಗರಾಜ್, ಆರ್.ಎಲ್ ಜಾಲಪ್ಪ ಆಸ್ಪತ್ರೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು, ಜಲಗಾರರು ಇದ್ದರು.