

ಕುಂದಾಪುರ : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧರು ಸದ್ಯ ದೇಶದ ಕರಾವಳಿ ಉದ್ದಕ್ಕೂ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಇಳಿದಿದ್ದು. ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ಯೋಧರು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ರಾಷ್ಟ್ರೀಯ ಭದ್ರತೆ ಬಗ್ಗೆ ಜಾಗೃತಿ ಮೂಡಿಸುವುದು, ಕಳ್ಳಸಾಗಣೆ, ವಿಶೇಷವಾಗಿ ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳ ಮತ್ತು ಸ್ಫೋಟಕಗಳ ಅಪಾಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸ್ಥಳೀಯ ಸಮುದಾಯಗಳು ಮತ್ತು ಭದ್ರತಾ ಸಂಸ್ಥೆಗಳು, ಸಿಐಎಸ್ಎಫ್ ನಡುವೆ ಉತ್ತಮ ಸಂಬಂಧ ಮೂಡಿಸಲು, ದೇಶದ ಭದ್ರತೆ, ಐಕ್ಯತೆ ಮೂಡಿಸಲು ಸಿಐಎಸ್ಎಫ್ ಜಾಥಾ ಎರ್ಪಡಿಸಲಾಗಿದೆ’ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಸಿಐಎಸ್ಎಫ್ ವತಿಯಿಂದ ದೇಶದ ಪೂರ್ವ ಹಾಗೂ ಪಶ್ಚಿಮ ಕರಾವಳಿಯ ಮೂಲಕ ಸಾಗುವ ಸೈಕ್ಲೊಥಾನ್ ಕುಂದಾಪುರಕ್ಕೆ ಬುಧವಾರ ಆಗಮಿಸಿದ ಸಂದರ್ಭ ಕುಂದಾಪುರದ ಮೊಗವೀರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಡೆಪ್ಯುಟಿ ಕಮಾಂಡೆಂಟ್ ವಿಭು ಸಿಂಗ್ ಪ್ರತಿಹಾರ್ ಕರಾವಳಿಯನ್ನು ಉಗ್ರಗಾಮಿ ಚಟುವಟಿಕೆಗೆ, ಪಕ್ಕದ ರಾಷ್ಟ್ರಗಳಿಂದ ಭಾರತಕ್ಕೆ ಕಳ್ಳದಾರಿ ಮೂಲಕ ಒಳ ನುಸುಳಲು, ಮಾದಕ ದ್ರವ್ಯಕಳ್ಳ ಸಾಗಾಟಕ್ಕೆ ಬಳಸುತ್ತಾರೆ. ಆದ್ದರಿಂದ ಕರಾವಳಿಯ ಜನ ಈ ಬಗ್ಗೆ ಏನೇ ಮಾಹಿತಿ ಇದ್ದರೂ ಕಾನೂನು ಪಾಲಕರಿಗೆ ನೆರವಾಗಬೇಕು. ಯುವಜನತೆ ಮಾದಕ ಜಾಲದಲ್ಲಿ ಸಿಲುಕಿದರೆ ಹೊರಬರಲು ಕಷ್ಟವಾದ್ದರಿಂದ ಎಚ್ಚರವಹಿಸಬೇಕು’ ಎಂದು ಹೇಳಿದರು.
ಮಾಜಿ ಸೈನಿಕ ಗಣಪತಿ ಖಾರ್ವಿ ಬಸ್ರೂರು, ಮಾಜಿ ಕಮಾಂಡೆಂಟ್ ಪ್ರದೀಪ್ ಖಾರ್ವಿ ಬಸ್ರೂರು, ಮಾಜಿ ಸಿಆರ್ಪಿಎಫ್ ಸತ್ಯನಾರಾಯಣ, ಪ್ರಕಾಶ್ ಗುಲ್ವಾಡಿ, ಸಿಆರ್ಪಿಎಫ್ನ ದೀಪಕ್ ಬಸ್ರೂರು, ಟೀಮ್ ಸೇನಾಭಿಮಾನಿಯ ರಾಜೇಶ್ ಕಾವೇರಿ ಅವರನ್ನು ಸಿಐಎಸ್ಎಫ್ ವತಿಯಿಂದ ಗೌರವಿಸಲಾಯಿತು.
ಸಹಾಯಕ ಕಮಿಷನರ್ ಮಹೇಶ್ಚಂದ್ರ ಕೆ., ಸಿಐಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ರಾಮಮೂರ್ತಿ ಕೌಂದೆಲ್ ಮಾತನಾಡಿದರು. ಸಿಐಎಸ್ಎಫ್ ಸಹಾಯಕ ಕಮಾಂಡೆಂಟ್ ಸಾಯಿ ನಾಯಕ್, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕುಂದಾಪುರ ಪುರಸಭೆ ಮುಖ್ಯಾಕಾರಿ ಆನಂದ ಜೆ., ಮೊಗವೀರ ಮಹಾಜನಸಭಾ ಬಗ್ವಾಡಿ ಹೋಬಳಿ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಕಾಲೇಜಿನ ನೇವಲ್ ಕೆಡೆಟ್ ಸಿಂಧು ಕಾರ್ಯಕ್ರಮ ನಿರ್ವಹಿಸಿ, ಟೀಮ್ ಸೇನಾಭಿಮಾನಿಯ ರಾಜೇಶ್ ಕಾವೇರಿ ಸ್ವಾಗತಿಸಿ, ವಂದಿಸಿದರು.
ಸಿಐಎಸ್ಎಫ್ನ ಪುರುಷ ಹಾಗೂ ಮಹಿಳಾ ಸಿಬಂದಿ 125 ಸೈಕ್ಲಿಸ್ಟ್ಗಳ ಒಂದು ತಂಡ ಗುಜರಾತ್ನಲ್ಲಿರುವ ಪಾಕ್ ಗಡಿಯಿಂದ, ಡಿಯು ಡಾಮನ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮೂಲಕ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗಲಿದೆ. 2,900 ಕಿ.ಮೀ. ಸವೆಸಿ ಕುಂದಾಪುರಕ್ಕೆ ಆಗಮಿಸಿದ್ದು ಇನ್ನು 800 ಕಿ.ಮೀ. ಪ್ರಯಾಣ ಇದೆ. ಇನ್ನೊಂದು ತಂಡ ಪಶ್ಚಿಮ ಬಂಗಾಳದಿಂದ ಹೊರಟು ಒಡಿಶಾ, ಆಂಧ್ರಪ್ರದೇಶ, ಪುದುಶೇರಿ ಮೂಲಕ ತಮಿಳುನಾಡಿನ ಕನ್ಯಾಕುಮಾರಿ ತಲುಪಲಿದೆ. ಮಾ.7ರಂದು ಒಟ್ಟು 6,553 ಕಿ.ಮೀ.ಗಳ ಪಯಣ ಆರಂಭವಾಗಿದ್ದು ಎ.1ರಂದು ಸಮಾಪನಗೊಳ್ಳಲಿದೆ.
ಸಿಐಎಸ್ಎಫ್ ಸೈಕ್ಲೊಥಾನ್ ರ್ಯಾಲಿಯನ್ನು ಕುಂದಾಪುರದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಪುರಸಭಾ ಉಪಾಧ್ಯಕ್ಷೆ ವನಿತಾ ಬಿಲ್ಲವ, ಪುರಸಭಾ ಸದಸ್ಯರಾದ ಸಂತೋಷ್ ಶೆಟ್ಟಿ, ಗಿರೀಶ್ ಜಿ.ಕೆ., ಹಾಗೂ ಸ್ಥಳೀಯ ಯುವಕ ಮಂಡಲದವರು ಅತ್ಯಂತ ಗೌರವ ಪೂರಕವಾಗಿ ಸ್ವಾಗತಿಸಿಕೊಂಡರು.










