ಬೆಂಗಳೂರು: ಕೆಪಿಎಸ್ಸಿಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದು ಅವರ ಮೂಲಕ
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡು ವಂಚಿಸಿದ್ದ ಸಿಐಡಿ ಕಚೇರಿ ಅಧಿಕಾರಿ ಸೇರಿ ಇಬ್ಬರು.
ವಿಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳು ಸಿಐಡಿ ಕಚೇರಿಯಲ್ಲೇ ಡೀಲ್ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಸಿಐಡಿ ಕಚೇರಿಯ ಆರ್ಥಿಕ
ಅಪರಾಧ ವಿಭಾಗದಲ್ಲಿ ಸೆಕ್ಷನ್ ಸೂಪರಿಡೆಂಟ್ ಆಗಿರುವ ಆರ್ಪಿಸಿ ಲೇಔಟ್ನ ನಿವಾಸಿ ಅನಿತಾ (42) ಹಾಗೂ ಆಕೆಯ ಸಹಚರ ರಾಮಚಂದ್ರ
ಭಟ್(56) ಬಂಧಿತರು.
ಆರೋಪಿಗಳು ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನೀಲ್ ಎಂಬಾತನಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 40 ಲಕ್ಷ ರೂ.ಪಡೆದು ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು
ಪೊಲೀಸರು ಹೇಳಿದರು.
ದೂರದಾರ ಸುನೀಲ್ಗೆ 2021ರಲ್ಲಿ ಸ್ನೇಹಿತ ಮಂಜುನಾಥ್ ಮೂಲಕ ರಾಮಚಂದ್ರ ಭಟ್ ಪರಿಚಯವಾಗಿದ್ವು ಆಗ ಆರೋಪಿ ರಾಮಚಂದ್ರ ಭಟ್,
“ತನಗೆ ಬೆಂಗಳೂರಿನ ಸಿಐಡಿ ಘಟಕ ಸೆಕ್ಷನ್ ಸೂಪರಿಡೆಂಟ್ ಅನಿತಾಳ ಪರಿಚಯವಿದೆ. ಅವರಿಗೆ ಕೆಪಿಎಸ್ಸಿ ಹಾಗೂ ಸರ್ಕಾರದ ಉನ್ನತ
ಹುದ್ದೆಯಲ್ಲಿರುವ ಹಲವು ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ. ಅವರ ಮೂಲಕ ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ’ ಎಂದು ನಂಬಿಸಿದ್ದ ಅಲ್ಲದೆ,
ಅನಿತಾ ಅವರು ಕೇಳಿದಷ್ಟು ಹಣ ಕೊಡಬೇಕು ಎಂದು ದೂರುದಾರನಿಗೆ ಆರೋಪಿ ಬೇಡಿಕೆ ಇಟ್ಟಿದ್ದ ಎಂದು ಪೊಲಿಸರು ಹೇಳಿದರು.
ಸಿಐಡಿ ಕಚೇರಿಯಲ್ಲೇ ಡೀಲ್: ಕೆಲ ದಿನಗಳ ಬಳಿಕ ಸಿಐಡಿ ಕಚೇರಿಗೆ ದೂರುದಾರನನ್ನು ಕರೆ ತಂದಿದ್ದ ರಾಮಚಂದ್ರ ಭಟ್, ಅನಿತಾರನ್ನು ಭೇಟಿ
ಮಾಡಿಸಿದ್ದ. ಈ ವೇಳ ಅನಿತಾ, ತನ್ನ ಕಚೇರಿ, ಐಡಿ ಕಾರ್ಡ್ ತೋರಿಸಿ ನಂಬಿಸಿದ್ದರು. ಅಲ್ಲದೆ, ಕೆಪಿಎಸ್ಸಿ ಸದಸ್ಯರ ಮೂಲಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಯನ್ನು ಕೊಡಿಸುವುದಾಗಿ ಸುನೀಲ್ ನನ್ನು ನಂಬಿಸಿದ್ದಾರೆ. ಬಳಿಕ ಸರ್ಕಾರಿ ಉದ್ಯೋಗಕ್ಕಾಗಿ 40 ಲಕ್ಷ ರೂ. ಕೊಡಬೇಕೆಂದು ಬೇಡಿಕೆಯಿಟ್ಟಿದ್ದರು. ಸರ್ಕಾರಿ ಉದ್ಯೋಗ ಆಮಿಷಕ್ಕೊಳಗಾದ ಸುನೀಲ್, 2021ರ ಡಿಸೆಂಬರ್ ಹಾಗೂ 2022ರ ಫೆಬ್ರವರಿಯಲ್ಲಿ ಆರೋಪಿಗಳಿಗೆ ಹಂತ-ಹಂತವಾಗಿ 40 ಲಕ್ಷ ರೂ. ನೀಡಿದ್ದರು. ಆದರೆ ಯಾವುದೇ ಸರ್ಕಾರಿ ಕೆಲಸ ಕೊಡಿಸಿಲ್ಲ, ಹಣ ವಾಪಸ್ ಹಿಂತಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸುನೀಲ್ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿಚಾರಣೆಯಲ್ಲಿ ಇದುವರೆಗೂ ಹತ್ತಾರು ಮಂದಿಗೆ ಸುಮಾರು 2 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.