

ಉಡುಪಿ: ಮಾನವ ಹಾಗೂ ದೇವರೊಂದಿಗೆ ಹೇಗೆ ಬದುಕಬೇಕು ಎನ್ನುವುದನ್ನು ತೋರಿಸಿಕೊಡುವುದೇ ನಿಜವಾದ ಕ್ರಿಸ್ಮಸ್ ಆಗಿದೆ ಎಂದು ಸಿಎಸ್ ಐ ಕರ್ನಾಟಕ ದಕ್ಷಿಣ ಪ್ರಾಂತ ಧರ್ಮಾಧ್ಯಕ್ಷರಾದ ಅತಿ ವಂ|ಹೇಮಚಂದ್ರ ಕುಮಾರ್ ಹೇಳಿದರು.ಅವರು ಗುರುವಾರ ಶೋಕಮಾತಾ ಚರ್ಚ್ ಸಭಾಂಗಣದಲ್ಲಿ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ವತಿಯಿಂದ ಮಾಧ್ಯಮ ಮಿತ್ರರಿಗೆ ಆಯೋಜಸಿದ್ದ ಸೌಹಾರ್ದ ಕ್ರಿಸ್ಮಸ್ ಆಚರಣೆಯ ಅಧ್ಯಕ್ಷತೆ ವಹಿಸಿದ ಮಾತನಾಡಿದರು.
ಯೇಸು ಸಮುದಾಯದ ಮಧ್ಯೆ ಮನುಷ್ಯತ್ವದ ಕಾರ್ಯವುಳ್ಳ ವ್ಯಕ್ತಿಯಾಗಿ ಬದುಕುವುದರ ಮೂಲಕ ಮಾದರಿಯಾದರು. ಅದೇ ಕೆಲಸವನ್ನು ಇಂದಿಗೂ ಪ್ರತಿಯೊಬ್ಬರೂ ಕೂಡ ಮುಂದುವರೆಸುವಂತೆ ಮಾಡಲು ಕ್ರಿಸ್ಮಸ್ ಹಬ್ಬ ಸಹಕಾರಿ. ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುವಿನ ಹಬ್ಬ ನಮ್ಮೆಲ್ಲರಲ್ಲಿ ಶಾಂತಿ ಸೌಹಾರ್ದತೆಯ ಜೀವನ ನಡೆಸಲು ಸಹಕಾರಿಯಾಗಲಿ ಎಂದರು.
ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ. ಚಂದ್ರ ಶೇಖರ್, ಉಡುಪಿ ಜಿಲ್ಲಾ ವಾರ್ತಾಧಿಕಾರಿ ಬಿ ಮಂಜುನಾಥ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಶುಭ ಹಾರೈಸಿದರು.
2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಧರ್ಮಪ್ರಾಂತ್ಯದ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಉಡುಪಿ ಪತ್ರಿಕಾ ಭವನದ ಸಹ ಸಂಚಾಲಕ ಅಂಕಿತ್ ಶೆಟ್ಟಿ, ವಂ|ಡಾ|ರೋಶನ್ ಡಿಸೋಜಾ, ವಂ|ಆಲ್ವಿನ್ ಉಪಸ್ಥಿತರಿದ್ದರು.
ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸ್ವಾಗತಿಸಿ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವಂದಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.





