

ಉಡುಪಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯೇಸು ಕ್ರಿಸ್ತರ ಜನನದ ಕಥೆಯನ್ನು ನೃತ್ಯ ರೂಪದ ಮೂಲಕ ಅದ್ಭುತವಾಗಿ ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಕೋರಿಯನ್ ತಂಡದ ಮೂಲಕ ಶನಿವಾರ ಸಂಜೆ ಪ್ರದರ್ಶನಗೊಂಡಿತು.
ಉಡುಪಿಯ ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಲೊಂಬಾರ್ಡ್ ಮಿಶನ್ ಆಸ್ಪತ್ರೆ, ಕರ್ನಾಟಕ ಯುವಕ ಸಂಘ ಮತ್ತು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಯೋಗದೊಂದಿಗೆ “ಕ್ರಿಸ್ಮಸ್ ಕ್ರಿಸ್ತೋತ್ಸವ -2024” ಕಾರ್ಯಕ್ರಮದಲ್ಲಿ ಕೋರಿಯದ ಸುಮಾರು 60 ಕಲಾವಿದರ ತಂಡ ವಿಶಿಷ್ಠವಾದ ಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಅಧ್ಭುತವಾಗಿ ಪ್ರದರ್ಶಿಸಿದರು.
ಯೇಸುವಿನ ಜನನದ ಕಥೆಯನ್ನು 60 ಮಂದಿಯ ಕೋರಿಯನ್ ಹಾಗೂ ಬೆಂಗಳೂರಿನ ಕಲಾವಿದರ ತಂಡವು ಕನ್ನಡ ಭಾಷೆಯ ದ್ವನಿ ಮುದ್ರಿತ ಹಾಡುಗಳು ಮತ್ತು ಸಂಗೀತದಿಂದ ಸಮೃದ್ಧವಾದ ನೃತ್ಯರೂಪಕವನ್ನು ದ್ವನಿ ಮತ್ತು ಬೆಳಕಿನ ಪ್ರದರ್ಶನದೊಂದಿಗೆ ನೆರೆದಿದ್ದ ಸಭಿಕರಿಗೆ ಮನರಂಜಿಸಿದರು.
“ಕ್ರಿಸ್ಮಸ್ ಕ್ರಿಸ್ತೋತ್ಸವ -2024” ಕಾರ್ಯಕ್ರಮವನ್ನು ಬಲೂನುಗಳನ್ನು ಹಾರಿ ಬಿಡುವುದರ ಮೂಲಕ ನೆರೆದಿದ್ದ ಗಣ್ಯರು ಚಾಲನೆ ನೀಡಿದರು.
ಕ್ರಿಸ್ಮಸ್ ಭಕ್ತಿ ಗೀತೆಯಾದ ಸೈಲೆಂಟ್ ನೈಟ್ ನ್ನು ಎಲ್ಲಾ ಕ್ರೈಸ್ತ ಸಭೆಗಳ ಧರ್ಮಗುರುಗಳು ಜೊತೆಯಾಗಿ ಏಕ ಕಾಲದಲ್ಲಿ ಕೊಂಕಣಿ, ಕನ್ನಡ, ತುಳು, ಮಲಯಾಳಂ ಮತ್ತು ಆಂಗ್ಲ ಭಾಷೆಯಲ್ಲಿ ಹಾಡುವುದರ ಮೂಲಕ ಸಭಿಕರನ್ನು ರಂಜಿಸಿದರು.
ಸಿಎಸ್ ಐ ಕರ್ನಾಟಕ ದಕ್ಷಿಣ ಪ್ರಾಂತ ಧರ್ಮಾಧ್ಯಕ್ಷರಾದ ಅತಿ ವಂ|ಹೇಮಚಂದ್ರ ಕುಮಾರ್ ಮಾತನಾಡಿ ಮಾನವ ಹಾಗೂ ದೇವರೊಂದಿಗೆ ಹೇಗೆ ಬದುಕಬೇಕು ಎನ್ನುವುದನ್ನು ತೋರಿಸಿಕೊಡುವುದೇ ನಿಜವಾದ ಕ್ರಿಸ್ಮಸ್ ಆಗಿದೆ. ಯೇಸು ಸಮುದಾಯದ ಮಧ್ಯೆ ಮನುಷ್ಯತ್ವದ ಕಾರ್ಯವುಳ್ಳ ವ್ಯಕ್ತಿಯಾಗಿ ಬದುಕುವುದರ ಮೂಲಕ ಮಾದರಿಯಾದರು. ಅದೇ ಕೆಲಸವನ್ನು ಇಂದಿಗೂ ಪ್ರತಿಯೊಬ್ಬರೂ ಕೂಡ ಮುಂದುವರೆಸುವಂತೆ ಮಾಡಲು ಕ್ರಿಸ್ಮಸ್ ಹಬ್ಬ ಸಹಕಾರಿ ಎಂದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ ಕ್ರಿಸ್ತ ಜಯಂತಿ ಪ್ರೀತಿಯ ಹಬ್ಬವಾಗಿದ್ದು, ದೇವರು ತನ್ನ ಏಕ ಮಾತ್ರ ಪುತ್ರರನ್ನು ಈ ಜಗತ್ತಿಗೆ ನೀಡಿ ಪ್ರೀತಿಯ ನಿಜವಾದ ಆರ್ಥವನ್ನು ತೋರ್ಪಡಿಸಿದ್ದಾರೆ. ಯೇಸು ಸ್ವಾಮಿ ದೈವತ್ವವನ್ನು ತೊರೆದು ಮಾನವತ್ವವನ್ನು ಸ್ವೀಕರಿಸಿದರು. ಯೇಸು ಕ್ರಿಸ್ತರಂತೆ ಶಾಂತಿ, ಪ್ರೀತಿ ಹಾಗೂ ದೀನತೆ ನಮ್ಮೆಲ್ಲರದ್ದಾಗಲಿ ಎಂದರು.
ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಥಿಯೋಲೊಜಿ ಪ್ರಾಂಶುಪಾಲರಾದ ವಂ|ಸೈಮನ್ ಅಬ್ರಾಹಾಂ, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಹಾಗೂ ಕಾರ್ಯಕ್ರಮ ಆಯೋಜನಾ ಸಮಿತಿಯ ಸಂಚಾಲಕರಾದ ಡಾ. ಸುಶೀಲ್ ಜತ್ತನ್ನ, ಕರ್ನಾಟಕ ಸರ್ವ ಕ್ರೈಸ್ತ ಸಭೆಗಳ ಒಕ್ಕೂಟದ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಇದರ ಅಧ್ಯಕ್ಷರಾದ ಸಂತೋಷ್ ಡಿಸಿಲ್ವಾ, ಅಂತರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯ ಜುನ್ ಚಾಂಗ್ ಇಯೋಲ್, ಸಿಎಸ್ ಐ ಉಡುಪಿ ಸಭಾಪಾಲಕ ವಂ ಐವನ್ ಡಿ ಸೋನ್ಸ್, ಸೈಂಟ್ ಮೇರಿಸ್ ಸೀರಿಯನ್ ಕ್ಯಾಥಡ್ರಲ್ ಬ್ರಹ್ಮಾವರ ಇದರ ವಿಕಾರ್ ಜನರಲ್ ವಂ ಎಮ್ ಸಿ ಮಥಾಯಿ, ಯುಬಿಎಂ ಚರ್ಚಿನ ಎಬನೇಜರ್ ಕ್ರಿಸ್ಟೋಫರ್ ಕರ್ಕಡ, ಫುಲ್ ಗಾಸ್ಪೆಲ್ ಸಭೆಯ ಪಾಸ್ಟರ್ ಕೆ ವಿ ಪೌಲ್, ಉಡುಪಿ ಶೋಕಮಾತಾ ದೇವಾಲಯದ ಧರ್ಮಗುರು ವಂ ಚಾರ್ಲ್ಸ್ ಮಿನೇಜಸ್, ವಂ|ಬಿನೋಯ್ ಜೊಸೇಫ್, ವಂ|ಲಿಯೋ ಡಿಸೋಜಾ, ಪಾಸ್ಟರ್ ಮಂಜು ಗಿಡಿ, ಪಾಸ್ಟರ್ ವಿಜೆ ಆಬ್ರಾಹಾಂ, ವಂ. ಡೇವಿಡ್ ತೋಮಸ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಚೀತ್ ನಿರೂಪಿಸಿದರು.





























