









ನನ್ನ ಆತ್ಮೀಯ ಸ್ನೇಹಿತರೇ,
ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಿಸ್ಮಸ್ ಎಂದಾಕ್ಷಣ ಮೊದಲ ಅನಿಸಿಕೆ ಸಂತೋಷ ಹಾಗೂ ಉತ್ಸಾಹ. ವಿದ್ಯುತಾಲಂಕಾರಗಳು, ರಂಗುರಂಗಿನ ವಾತಾವರಣ. ಇನ್ನೊಂದು ಮನ ಸೆಳೆಯುವ ದೃಶ್ಯವೆಂದರೆ ದನದ ಕೊಟ್ಟಿಗೆಯಲ್ಲಿನ ಗೋದಲಿಯಲ್ಲಿ ಹುಟ್ಟಿದ ಬಾಲಯೇಸು. ಅಲ್ಲಿ ನೆಲೆಸಿದೆ ಸರಳತೆ ಹಾಗೂ ಶಾಂತತೆ. ಈ ದಿನ ನಮ್ಮ ಸಂತೋಷದಲ್ಲಿ ಭಾಗಿಯಾಗಲು ಬಂದಿದ್ದಕ್ಕಾಗಿ ಧನ್ಯವಾದಗಳು. “ಎನಗಿಂತ ಕಿರಿಯರಿಲ್ಲ” ಎಂಬಂತೆ ದೇವರು ಆತೀ ಸಣ್ಣವರಾಗಿ ಮಾನವರ ನಡುವೆ ಜನಿಸಿದರು. ಕೊಟ್ಟಿಗೆಯಲ್ಲಿ ಯೇಸುವಿನ ಜನನವು ನಮ್ಮ ಗಮನವನ್ನು ಸೆಳೆಯುತ್ತದೆ. ಚಿಕ್ಕದು, ಸುಂದರ ಎಂದು ಹೇಳಲಾಗುತ್ತದೆ. ಯಾವುದು ಸುಂದರ, ಅದು ನಮ್ಮನ್ನು ಆಕರ್ಷಿಸುತ್ತದೆ. ನಮ್ಮನ್ನು ಆತೀಯಾಗಿ ಆಕರ್ಷಿಸುವ ಸುಂದರವಾದ ಕಂದ- ಬಾಲ ಯೇಸು, ದೇವರು ಸಣ್ಣವನಾಗಿದ್ದಾನೆ. ಅವನಿಂದ ಪ್ರೀತಿಯ ಕಲೆಯನ್ನು ಕಲಿಯಲು ಅವನು ನಮ್ಮನ್ನು ಇಂದು ತನ್ನತ್ತ ಸೆಳೆಯುತ್ತಿದ್ದಾನೆ. ಯೇಸುವಿನ ಜೀವನವನ್ನು ಆವಲೋಕಿಸುತ್ತಾ, ಸ್ವಾಮಿ ವಿವೇಕಾನಂದರು ಹೇಳಿದರು: “ನಜರೇತಿನ ಯೇಸುವಿನ ದಿನಗಳಲ್ಲಿ, ನಾನು ಪ್ಯಾಲೆಸ್ತೀನ್‍ನಲ್ಲಿ ವಾಸಿಸುತ್ತಿದ್ದರೆ, ನಾನು ಅವರ ಪಾದಗಳನ್ನು ನನ್ನ ಕಣ್ಣೀರಿನಿಂದ ಅಲ್ಲ, ನನ್ನ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ!”. ಅವರು ಕ್ರಿಸ್ಮಸ್ ಮುನ್ನಾದಿನದಂದು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
ಯೇಸುಕ್ರಿಸ್ತರ ಬೋಧನೆಗಳನ್ನು ಸ್ವಾಮಿ ವಿವೇಕಾನಂದರಂತೆ, ಮಹಾತ್ಮಾ ಗಾಂಧೀಜಿಯವರು ಇಷ್ಟಪಟ್ಟರು ಮಾತ್ರವಲ್ಲ, ಅವರ “ಅಹಿಂಸಾ” ಚಳುವಳಿಯು ಯೇಸುಕ್ರಿಸ್ತರ ಉಪದೇಶಗಳಿಗೆ ಸರಿಸಮಾನಾಗಿಯೇ ಇತ್ತು. ಯೇಸುವು, ತನ್ನನು ಶಿಲುಬೆಗೇರಿಸಿ ಕೊಂದವರನ್ನು ಕ್ಷಮಿಸಿದಂತೆ, ಗಾಂಧೀಜಿ ಕೂಡ ತನ್ನ ವೈರಿಗಳ ವಿರುದ್ಧ ಪ್ರತೀಕಾರ ಬಯಸಲಿಲ್ಲ. ಪ್ರೀತಿ ಹಾಗೂ ಕ್ಷಮೆಗಳು ಯೇಸುವಿನ ಬೋಧನೆಯಲ್ಲಿ ಪ್ರಾಬಲ್ಯವಹಿಸಿದರೆ, ಅವುಗಳ ನಿಜವಾದ ಪರಿಪಾಲನೆಯನ್ನು ನಾವು ಗಾಂಧೀಜಿಯವರ ಜೀವನದಲ್ಲಿ ಕಾಣುತ್ತೇವೆ. ಗಾಂಧೀಜಿಯವರು ತಮ್ಮ ಸಮಕಾಲೀನ ಸಮಾಜದ ಕುಂದು ಕೊರತೆಗಳನ್ನು ಸಪ್ತ ಪಾತಕಗಳ ಮೂಲಕ ಗುರುತಿಸಿಕೊಟ್ಟರು: ತತ್ವರಹಿತ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚಾರಿತ್ರ್ಯವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ ಹಾಗೂ ತ್ಯಾಗವಿಲ್ಲದ ಧರ್ಮ. ಅಗಾಧ ಆಧ್ಯಾತ್ಮಿಕ ಶಕ್ತಿಯು ಮಾತ್ರ ಇಂತಹ ಪರಿಸ್ಥಿತಿಯಿಂದ ಹೊರಬರಲು ನೆರವಾಗಬಲ್ಲದು. ನೈಜ ದೈವಭಕ್ತಿ ಮಾತ್ರ ನಮ್ಮನ್ನು ಹಾಗೂ ಮುಂದಿನ ಪೀಳಿಗೆಯನ್ನು ಅತಿರೇಕಗಳಿಂದ ರಕ್ಷಿಸಬಲ್ಲುದು.
ನಮ್ಮ ಸುತ್ತಮುತ್ತಲೂ ಭ್ರ್ರಷ್ಟಾಚಾರವು ‘ಕ್ಯಾನ್ಸರ್ ರೋಗ’ ದಂತೆ ತಾಂಡವಾಡುತ್ತಿದೆ. ಇದು ನಮ್ಮ ಆತ್ಮಸಾಕ್ಷಿಯನ್ನು ಸಾಯಿಸುತ್ತಿದೆÉ. ದೃಶ್ಯ ಮಾಧ್ಯಮ, ಮುದ್ರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ನಾವು ದ್ವೇಷ, ಅನ್ಯಾಯ ಹಾಗೂ ಕ್ರೂರತೆÉಗಳ ನಿದರ್ಶನಗಳನ್ನು ಕಾಣುತ್ತಾ ಇದ್ದೇವೆ. ಬಲಾಢ್ಯರು ಹಾಗೂ ಧನಾಡ್ಯರಾಗುವುದೇ ನಮ್ಮ ಧ್ಯೇಯ ಎಂದು ಭಾಸವಾಗುತ್ತಿದೆ. ಎಲ್ಲವು ಧನಲಾಭದ ಸುತ್ತಮುತ್ತ ಕೇಂದ್ರೀಕ್ರತವಾಗಿದೆ. ಧರ್ಮವು ಕೇವಲ ಬಾಹ್ಯಾಚಾರಣೆಗಳಿಗೆ ಸೀಮಿತವಾಗಿ, ನಮ್ಮ ಮನ: ಪರಿವರ್ತನೆಗೋಳಿಸುವಲ್ಲಿ ವಿಫಲವಾಗಿದೆ. ಇದಕ್ಕೂ ಮಿಗಿಲಾಗಿ ದುಃಖ ಹಾಗೂ ಹತಾಶೆಯ ವಿಷಯವೇನೆಂದರೆ, ಸುತ್ತಮುತ್ತಲಿನ ಅತಿರೇಕಗಳು ನಮ್ಮನ್ನು ವಿಚಲಿತಗೊಳಿಸದೆ, ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೇವಲ ಫಾರ್ವರ್ಡ್ ಮಾಡುವುದರಲ್ಲಿ ನಾವು ಸೀಮಿತರಾಗಿದ್ದೇವೆ. ನಮ್ಮ ಆತ್ಮ ಸಾಕ್ಷಿಗಳು ನಿಷ್ಕ್ರಿಯವಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡತನ ಹಾಗೂ ಸರಳತೆಯಲ್ಲಿ ಜನಿಸಿದ ಯೇಸುವು ನೀಡುವ ಸಂದೇಶವಾದರೂ ಏನು?
ನಮ್ಮ ನಿಜವಾದ ಸ್ವಭಾವವನ್ನು ಅರಿತುಕೊಳ್ಳುವಂತೆ ಯೇಸು ಇಂದು ಬಯಸುತ್ತಾರೆ. ನಾವು ಪ್ರೀತಿಗಾಗಿ ರಚಿಸಲ್ಪಟ್ಟಿದ್ದೇವೆ, ದ್ವೇಷಕ್ಕಾಗಿ ಅಲ್ಲ. ದೇವರು ಪ್ರೀತಿ ಸ್ವರೂಪರು. ಅವರನ್ನು ದ್ವೇಷಿಸುವವರು, ದ್ವೇಷವನ್ನೆ ಉತ್ತೇಜಿಸುತ್ತಾರೆ. ಪ್ರೀತಿಯೇ ಸ್ವರ್ಗ ಮತ್ತು ದ್ವೇಷವೇ ನರಕ. ಪ್ರೀತಿಸುವ ಮತ್ತು ಸ್ವ-ತ್ಯಾಗ ಕೊಡುವ ಕಲೆಯನ್ನು ನಮಗೆ ಕಲಿಸಲು ದೇವರು ಮಾನವನಾದನು. ದೈವಿಕ ಮುಖವನ್ನು ಪಡೆಯಲು ನಮಗೆ ಸಹಾಯ ಮಾಡಲು ಅವರು ಮಾನವ ಮುಖವನ್ನು ಹೊಂದಿದ್ದಾರೆ. ಸರಳತೆ ಮತ್ತು ಬಡತನದಲ್ಲಿ ಜನಿಸಿದ ಮಗು ಮುಗ್ಧತೆ ಮತ್ತು ಪ್ರೀತಿಯ ಕಡೆಗೆ ನಮ್ಮ ಮಾರ್ಗಗಳನ್ನು ಬದಲಾಯಿಸಲು ಕರೆ ನೀಡುವ ಮೂಲಕ ನಮ್ಮ ಭರವಸೆಯನ್ನು ಹೆಚ್ಚಿಸುತ್ತದೆ. ಎಲ್ಲಾ ಸದ್ಗುಣಗಳಲ್ಲಿ ಪ್ರೀತಿಯು ಸರ್ವಶ್ರೇಷ್ಠವಾಗಿದೆ ಮತ್ತು ಅದು ಶಾಶ್ವತವಾಗಿರುತ್ತದೆ. ಯೇಸು ಸ್ವಾಮಿ ನಮ್ಮಲ್ಲಿ ನಿಜವಾದ ಪ್ರೀತಿಯನ್ನು ಹುಟ್ಟುಹಾಕಲಿ. ಪ್ರತಿಯೊಬ್ಬ ಕ್ರೈಸ್ತ ಪ್ರೀತಿ ಮತ್ತು ಸೇವೆಯನ್ನು ವ್ಯಕ್ತಪಡಿಸುತ್ತಾನೆ. ಕೆಲವು ಜನರು ಕ್ರಿಸ್ತನ ಅನುಯಾಯಿಗಳನ್ನು ಅನುಮಾನದಿಂದ ನೋಡಲು ಮೋಸಗಾರರಾಗಿ ದಾರಿ ತಪ್ಪಿಸುತ್ತಾರೆ. ಆದರೆ ಕರ್ತನು ನಮ್ಮನ್ನು ಪ್ರೀತಿಸಿದಂತೆ ನಿಜವಾದ ಕ್ರೈಸ್ತನು ಪ್ರೀತಿಸುತ್ತಾನೆ. ದ್ವೇಷವನ್ನು ಉತ್ತೇಜಿಸುವವರು ಇತರರನ್ನು ನಾಶಮಾಡುವ ಮೊದಲು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. ಅವರಲ್ಲಿ ದೇವರಿಲ್ಲ ಮತ್ತು ಆವರಲ್ಲಿ ಭರವಸೆಯೂ ಇಲ್ಲ.
ಈ ಕ್ರಿಸ್ಮಸ್ ಹಬ್ಬಕ್ಕೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನೀವು ಸಮಾಜಕ್ಕೆ ಮಾಡುವ ಸತ್ಯವನ್ನು ಎತ್ತಿ ಹಿಡಿಯುವ ಸೇವೆಗೆ ಋಣಿಯಾಗಿದ್ದೇನೆ. ನಮ್ಮ ರಕ್ಷಕನಾದ ಯೇಸುವಿನ ಜನನವು ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಒಳ್ಳೆಯತನ ಮತ್ತು ಪ್ರೀತಿಯನ್ನು ತುಂಬಲಿ. ನೆನಪಿಡಿ, ಪ್ರೀತಿ ಮಾತ್ರ ವಿಶ್ವಾಸಾರ್ಹವಾಗಿದೆ. ನೀವು ಪ್ರೀತಿಸಿದಾಗ, ನೀವು ಆಕರ್ಷಕರಾಗುತ್ತೀರಿ. ಈ ಕ್ರಿಸ್ಮಸ್ ನಿಮ್ಮನ್ನು ಪ್ರೀತಿಯ ದ್ಯೋತಕಗಳನ್ನಾಗಿ ಮಾಡಲಿ. ನಿಮಗೆ ಕ್ರಿಸ್ಮಸ್ ಹಬ್ಬದ ಮತ್ತು ಹೊಸ ವರ್ಷ 2023 ಶುಭಾಶಯಗಳು.
ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ಧರ್ಮಾಧ್ಯಕ್ಷರು, ಮಂಗಳೂರು ಧರ್ಮಕ್ಷೇತ್ರ