

ಶ್ರೀನಿವಾಸಪುರ: ಮಕ್ಕಳು ಪುಟ್ಟ ಕೃಷ್ಣನನ್ನು ತಮ್ಮ ಗೆಳೆಯನೆಂದು ಬಗೆದು ಖುಷಿ ಪಡುತ್ತಾರೆ ಎಂದು ತಾಲ್ಲೂಕು ಸನ್ಮಾರ್ಗ ಬಳಗದ ಅಧ್ಯಕ್ಷ ಡಿ.ಸತ್ಯಮೂರ್ತಿ ಹೇಳಿದರು.
ಪಟ್ಟಣದ ಭಾರತಿ ತೀರ್ಥರ ಸಭಾ ಭವನದಲ್ಲಿ ಶಂಕರ ಸೇವಾ ಸಮಿತಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣನದು ಮಹಾ ಭಾರತದ ಮಹಾಪಾತ್ರಗಳಲ್ಲಿ ಅತ್ಯಂತ ಮಹತ್ವದ ಪಾತ್ರ ಎಂದು ಹೇಳಿದರು.
ಮಹಾ ಕಾವ್ಯಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ಸನ್ಮಾರ್ಗ ತೋರಿಸುವ ಸಾಧನ. ಆದ್ದರಿಂದ ಪ್ರತಿಯೊಬ್ಬರೂ ರಾಮಾಯಣ, ಮಹಾಭಾರತ ಓದಬೇಕು. ಹಿರಿಯರು ಮಕ್ಕಳಿಗೆ ಮಹಾ ಕಾವ್ಯದ ಕತೆಗಳನ್ನು ಒದಲು ತಿಳಿಸಬೇಕು. ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಸನ್ಮಾರ್ಗ ಬಳಗದ ನಿರ್ದೇಶಕಿ ಮಂಗಳಾ ಸತ್ಯಮೂರ್ತಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆ ವೇಷ ಹಾಕಿ ತಂದಿದ್ದಾರೆ. ಸ್ಪರ್ಧೆ ಎಂಬುದನ್ನು ಮರೆಯಬೇಕು. ಮಕ್ಕಳಲ್ಲಿ ಮುದು ಕೃಷ್ಣನನ್ನು, ಪುಟ್ಟ ರಾಧೆಯನ್ನು ಕಂಡು ಸಂತೋಷಪಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣನನ್ನು ಕುರಿತ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಎಂ.ಆರ್.ಸುಜಾತ, ಎಂ.ಆರ್.ಆನಂದಬಾಬು, ದೀಪಾ ಆರ್.ಕುಲಕರ್ಣಿ, ಅರುಣ, ಅಮರನಾಥ್, ವೆಂಕಟರವಣಪ್ಪ ಇದ್ದರು.