ಮಕ್ಕಳ ಕ್ರಿಯಾತ್ಮಕ ದಸರಾ ರಜಾ-ಮಜಾ ಶಿಬಿರ 2022


ಮಲ್ಪೆ : ಜಾಗತೀಕರಣದಿಂದಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅತೀವ ಬದಲಾವಣೆ ಕಾಣುತ್ತಿದ್ದು ಬಹುಕುಟುಂಬದಲ್ಲಿದ್ದ ಅನೇಕ ಪದ್ಧತಿ ರೀತಿ-ನೀತಿಗಳು ದೂರವಾಗಿ ಅಜ್ಜ-ಅಜ್ಜಿಯರ ಪ್ರೀತಿ ಮಮತೆ ಮಾರ್ಗದರ್ಶನ ಈಗ ನಮ್ಮ ಮಕ್ಕಳಿಗೆ ಮರೀಚಿಕೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ರಜಾ ದಿನಗಳಲ್ಲಿ ಮನೆಯಲ್ಲಿದ್ದು ಟಿ.ವಿ. ನೋಡುತ್ತಾ ಕಾಲಕಳೆಯಬೇಕಾಗಿದೆ. ಇದನ್ನು ದೂರ ಮಾಡಲು ಇಂತಹ ಶಿಬಿರಗಳಲ್ಲಿ ಭಾಗವಹಿಸಿದಾಗ ಮಕ್ಕಳಲ್ಲಿ ಏಕಾಗ್ರತೆ ಸೌಹಾರ್ದತೆ ಹೆಚ್ಚುತ್ತದೆ ಎಂದು ರೋ| ಶ್ರೀ ದೇವ ಆನಂದ್ ರೋಟರಿ ಜಿಲ್ಲಾ ಗವರ್ನರ್ 3182 ಹೇಳಿದರು.
ಅವರು ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ, ರೋಟರಿ ಉಡುಪಿ ಮಿಡ್‍ಟೌನ್, ಗಾಂಧಿ ಶತಾಬ್ದಿ ಸ.ಮಾ.ಹಿ.ಪ್ರಾ ಶಾಲೆ ಮಲ್ಪೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡ ಮಕ್ಕಳ ಕ್ರಿಯಾತ್ಮಕ ದಸರಾ ರಜಾ-ಮಜಾ ಶಿಬಿರ ಉದ್ಘಾಟಿಸಿ ಮಾತಾಡಿದರು.
ಮುಖ್ಯ ಅತಿಥಿಯಾಗಿ ರೋ| ಶ್ರೀ ಸಂತೋಷ್‍ಕುಮಾರ್ ಜೆ. ಫೆರ್ನಾಂಡಿಸ್ ಮಾತಾಡಿ ಈ ಮೂರು ದಿನದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪಂಜಿನಿಂದ ಗೊಂಬೆ, ಹೂದಾನಿ, ಪೇಪರ್‍ಕ್ರಾಫ್ಟ್, ಅಭಿನಯಗೀತೆ, ರಂಗಕಲೆ, ಪರ್ಯಾಯ ಕವನ, ಎಂಬೋಸಿಂಗ್‍ಪೈಂಟ್ (ಉಬ್ಬು ಶಿಲ್ಪ) ಇವುಗಳ ತಯಾರಿಕೆ ಮಾಡುವುದನ್ನು ತಿಳಿಸುತ್ತಾ ಮಕ್ಕಳಲ್ಲಿ ಗುಂಪು ನಿರ್ವಹಣೆ ಕೌಶಲ್ಯ ಅನಾವರಣಗೊಂಡು ಬದುಕುವ ಕಲೆಗೆ ಪೂರಕ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಅಶೋಕ ಕೋಟ್ಯಾನ್ ಮಾತಾಡಿ ಇದೊಂದು ಅಭೂತಪೂರ್ವ ಕಾರ್ಯಕ್ರಮ ಇಂದು ನಾವೆಲ್ಲ ಪಾಶ್ಚಾತ್ಯ ಸಂಸ್ಕøತಿಯನ್ನು ಅನುಚಾನವಾಗಿ ಸ್ವೀಕರಿಸಿ ನಮ್ಮ ದೇಶಿಯತೆಯನ್ನು ದೂರ ಮಾಡಿದ್ದೇವೆ. ಇಂತಹ ಶಿಬಿರಗಳಿಂದ ಎಲ್ಲಾ ಕೌಶಲ್ಯಗಳು ಪುನರಪಿ ವಿದ್ಯಾರ್ಥಿಗಳಿಗೆ ನೆನೆಪಿಸಿಕೊಟ್ಟು ಜೀವನಮೌಲ್ಯ ಹೆಚ್ಚಿಸುವ ಈ ಪ್ರಯತ್ನ ನಿಜಕ್ಕೂ ಅಭಿನಂದಾರ್ಹವಾದದು ಎಂದು ಅಭಿಪ್ರಾಯ ಪಟ್ಟರು.
ಸಭಾಧ್ಯಕ್ಷತೆಯನ್ನು ಶ್ರೀಮತಿ ಸಂಧ್ಯಾ ಅವರು ನಿರ್ವಹಿಸಿ ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಏಕಾಗ್ರತೆ ಜೀವನಮೌಲ್ಯ ಬೆಳೆಯುತ್ತದೆ, ಅಲ್ಲದೇ ಮಕ್ಕಳು ಟಿ.ವಿ. ಮೊಬೈಲ್ ಬಳಕೆ ಕಡಿಮೆ ಮಾಡಲು ಇದು ಉತ್ತೇಜನ ನೀಡುತ್ತದೆ ಮತ್ತು ಸಮಯ ಸದ್ವಿನಿಯೋಗ ಮಾಡುವ ಪ್ರವೃತ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ರೋ | ರಾಮದೇವ ಕಾರಂತ ಐರೋಡಿ, ಶ್ರೀ ಬಾಲಕೃಷ್ಣ ಮೆಂಡನ್, ಶ್ರೀ ಶಂಕರ ಮುಖ್ಯ ಶಿಕ್ಷಕ ಗಾಂಧಿ ಶತಾಬ್ದಿ ಸ.ಮಾ.ಹಿ.ಪ್ರಾ. ಶಾಲೆ ಮಲ್ಪೆ ಹಾಗೂ ಶಿಬಿರ ನಿರ್ದೇಶಕ ಶ್ರೀ ರಮೇಶ ವಕ್ವಾಡಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾಮೋಹನ್ ಬೆಳ್ಮಣ್ ನಿರೂಪಿಸಿ, ಶಾಲಾ ಮುಖ್ಯ ಶಿಕ್ಷಕ ಶ್ರೀ ಶಂಕರ ಸ್ವಾಗತಿಸಿ, ಶ್ರೀ ರಮೇಶ ವಕ್ವಾಡಿ ಪ್ರಾಸ್ತಾವನೆಗೈದು, ಕು| ಅನಿಶಾ ಪೇತ್ರಿ ವಂದಿಸಿದರು. ಸುಮಾರು 55 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.