ಕೋಲಾರ:- ಜಿಲ್ಲೆಯ 65 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, 171 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ನಗರದ ಚಿನ್ಮಯ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಬರುವ ಮಕ್ಕಳಿಗೆ ಸ್ವತಃ ಹೂ ನೀಡಿ ಸ್ವಾಗತಿಸಿ, ಶುಭ ಕೋರಿದ ಅವರು, ಪರೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದರು.
ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 19743 ವಿದ್ಯಾರ್ಥಿಗಳ ಪೈಕಿ 19572 ಮಂದಿ ಹಾಜರಾಗಿದ್ದು, 171 ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.
ತಾಲ್ಲೂಕುವಾರು ಹಾಜರಿ ವಿವರ
ಬಂಗಾರಪೇಟೆ ತಾಲ್ಲೂಕಿನ 8 ಕೇಂದ್ರಗಳಲ್ಲಿ ಪ್ರಥಮ ಭಾಷೆಗೆ 2610 ಮಂದಿ ನೊಂದಾಯಿಸಿದ್ದು, 2600 ಮಂದಿ ಹಾಜರಾಗಿ 10 ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ 9 ಕೇಂದ್ರಗಳಲ್ಲಿ 3250 ಮಕ್ಕಳು ಹೆಸರು ನೊಂದಾಯಿಸಿದ್ದು, 3224 ಮಂದಿ ಹಾಜರಾಗಿ 26ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನ 18 ಕೇಂದ್ರಗಳಲ್ಲಿ 5062 ಮಂದಿ ಹೆಸರು ನೊಂದಾಯಿಸಿದ್ದು, 5031 ಮಂದಿ ಹಾಜರಾಗಿ ಕೇವಲ 31 ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ 8 ಕೇಂದ್ರಗಳಲ್ಲಿ 3239 ಮಂದಿ ಹೆಸರು ನೊಂದಾಯಿಸಿದ್ದು, 3196 ಮಂದಿ ಹಾಜರಾಗಿದ್ದು, 43 ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ತಾಲ್ಲೂಕಿನ 12 ಕೇಂದ್ರಗಳಲ್ಲಿ 3078 ಮಂದಿ ನೊಂದಾಯಿಸಿದ್ದು, 3027 ಮಂದಿ ಹಾಜರಾಗಿದ್ದು, 51 ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ 10 ಕೇಂದ್ರಗಳಲ್ಲಿ 2504 ಮಂದಿ ಹೆಸರು ನೊಂದಾಯಿಸಿದ್ದು, 2494 ಮಂದಿ ಹಾಜರಾಗಿದ್ದು, 10 ಮಂದಿ ಗೈರಾಗಿದ್ದಾರೆ.
ಮೊದಲ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.
ಬೆಳಗ್ಗೆ 9-50ರಿಂದಲೇ ಕೇಂದ್ರಕ್ಕೆ ಪ್ರವೇಶ
ಮಕ್ಕಳಿಗೆ ಹೂ ನೀಡುವ ಮೂಲಕ ಬೆಳಗ್ಗೆ 9-50ಕ್ಕೆ ಪ್ರವೇಶ ನೀಡಲು ಆರಂಭಿಸಲಾಯಿತು. ಮೊದಲ ದಿನದ ಪರೀಕ್ಷೆ ಬರೆಯುವ ಆತಂಕ ಮತ್ತು ಇಲಾಖೆ ಇದೇ ಮೊದಲ ಬಾರಿಗೆ ಸಿಸಿ ಕ್ಯಾಮರಾ, ವೆಬ್ ಕಾಸ್ಟಿಂಗ್ ಮಾಡುತ್ತಿರುವ ಹಿನ್ನಲೆಯಲ್ಲಿ ಮಕ್ಕಳು ಭಯದಿಂದಲೇ ಕೇಂದ್ರದತ್ತ ಬಂದಿದ್ದು ಕಂಡು ಬಂತು.
ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯ ಜಾಗೃತದಳ ತಂಡ ಸೇರಿದಂತೆ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಅನೇಕ ಮಂದಿ ಪೋಷಕರು ಪದವಿ, ದ್ವಿತೀಯ ಪಿಯುಸಿಗಿಲ್ಲದ ವೆಬ್ಕಾಸ್ಟಿಂಗ್ ಎಸ್ಸೆಸ್ಸೆಲ್ಸಿಗೆ ಏಕೆ ಎಂದು ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂತು.
ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡೆಲ್ ಅಧಿಕಾರಿ ಕೃಷ್ಣಪ್ಪ, ಶಿಕ್ಷಣಾಧಿಕಾರಿಗಳಾದ ಸಗೀರಾ ಅಂಜುಂ,ಭಾಗ್ಯವತಮ್ಮ, ಡಿವೈಪಿಸಿಗಳಾದ ಚಂದ್ರಕಲಾ, ಗುರುಮೂರ್ತಿ, ಬಿಇಒಗಲಾದ ಕನ್ನಯ್ಯ, ಗಂಗರಾಮಯ್ಯ, ಮುನಿವೆಂಕಟರಾಮಾಚಾರಿ, ಚಂದ್ರಕಲಾ, ಸುಕನ್ಯಾ, ಮುನಿಲಕ್ಷ್ಮಯ್ಯ,ಎವೈಪಿಸಿ ಮೋಹನ್ಬಾಬು, ವಿಷಯ ಪರೀಕ್ಷಕರಾದ ಶಶಿವಧನ, ಗಾಯತ್ರಿ, ಶಂಕರೇಗೌಡ, ವೆಂಕಟೇಶಬಾಬು ಮತ್ತಿತರರೂ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದರಲ್ಲದೇ ಸಣ್ಣಪುಟ್ಟ ಲೋಪಗಳಿಗೂ ಅವಕಾಶವಿಲ್ಲದಂತೆ ಎಚ್ಚರವಹಿಸಿ ಮೆಚ್ಚುಗೆಗೆ ಪಾತ್ರವಾದರು.
ಎಲ್ಲಾ ಕೇಂದ್ರಗಳಲ್ಲೂ ಭದ್ರತೆಗಾಗಿ ಮಹಿಳಾ,ಪುರಷ ಪೊಲೀಸರನ್ನು ನಿಯೋಜಿಸಿದ್ದು, ಎಲ್ಲೂ ಸಮಸ್ಯೆಗಳು ಕಂಡು ಬರಲಿಲ್ಲ ಜತೆಗೆ ಎಲ್ಲಾ ಕೇಂದ್ರಗಳಿಗೂ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಸಾಧನದೊಂದಿಗೆ ಓರ್ವ ಆರೋಗ್ಯ ಸಿಬ್ಬಂದಿಯನ್ನು ಒದಗಿಸಲಾಗಿತ್ತು.
ಒಟ್ಟಾರೆ ಮೊದಲದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಐದು ವಿಷಯಗಳ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯ ತಂದುಕೊಟ್ಟಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ಚಿನ್ಮಯ ವಿದ್ಯಾಲಯ ಕೇಂದ್ರದಲ್ಲಿ ಡಿಡಿಪಿಐ ಅವರೊಂದಿಗೆ ಮುಖ್ಯ ಅಧೀಕ್ಷಕಿ ತಾಹೇರಾ ನುಸ್ರತ್, ಪ್ರಶ್ನೆಪತ್ರಿಕೆ ಅಭಿರಕ್ಷಕಿ ಮಂಜುಳಾ, ಮೊಬೈಲ್ ಸ್ವಾಧೀನಾಧಿಕಾರಿ ವೆಂಕಟರಮಣಪ್ಪ, ಶಿಕ್ಷಕರಾದ ಭವಾನಿ, ಕೆ.ಲೀಲಾ, ಶ್ವೇತಾ,ಸುಗುಣಾ,ಫರೀದಾ,ಧನಲಕ್ಷ್ಮಿ, ಜ್ಞಾನಸಂಗೀತಾ, ಸುಮಿತ್ರಾ, ಜರೀನಾ ಅಂಜುಂ, ನಾಗವೇಣಿ, ರೇಖಾ ದೊಡ್ಡಮುನಿ,ರತ್ನಮ್ಮ, ಭಾಗ್ಯಲಕ್ಷ್ಮಿ, ಪದ್ಮಜ, ಸಲ್ಮಾಸುಲ್ತಾನಾ, ಸಹೆರಾ ಅಂಜುಂ, ಕೋಮಲಾ, ವಿನುತಾ, ಅನುಸೂಯಾ, ವಾಣಿ ಮತ್ತಿತರರಿದ್ದರು.