ಭೋವಿ ಕಾಲೋನಿಯಲ್ಲಿ ಶಿಥಿಲಗೊಂಡ ಶಾಲಾ ಕಟ್ಟಡ-ಹಾಸ್ಟೆಲ್ ಕಟ್ಟಡಕ್ಕೆ ಮಕ್ಕಳ ಸ್ಥಳಾಂತರ: ಸಿ.ಆರ್.ಅಶೋಕ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ನಗರದ ಭೋವಿ ಕಾಲೋನಿಯಲ್ಲಿನ ಸರ್ಕಾರಿ ಶಾಲೆಯ ಬಾಡಿಗೆ ಕಟ್ಟಡ ಶಿಥಿಲಗೊಂಡಿದ್ದ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮನವೊಲಿಸಿ ಶಾಲೆಯನ್ನು ಹತ್ತಿರದ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ವಸತಿ ನಿಲಯದ ಎರಡು ಕೊಠಡಿಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.
ಶುಕ್ರವಾರ ಶಿಥಿಲ ಕಟ್ಟಡದಿಂದ ಮಕ್ಕಳನ್ನು ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಕಟ್ಟಡಕ್ಕೆ ಸ್ಥಳಾಂತರಿಸಿದ ನಂತರ ಮಾತನಾಡಿದ ಅವರು, ಇಲ್ಲಿ ಒಂದರಿಂದ 5ನೇ ತರಗತಿ ಇದ್ದು, ಕಟ್ಟಡ ಶಿಥಿಲಗೊಂಡಿದೆ ಮತ್ತು ಇತ್ತೀಚಿನ ಮಳೆಯಿಂದಾಗಿ ಛಾವಣಿ ಸೋರುತ್ತಿದ್ದು, ಶಾಲೆ ನಡೆಸಲು ಕಷ್ಟವಾಗಿತ್ತು ಎಂದು ತಿಳಿಸಿದ ಅವರು, ಈ ಭಾಗದಲ್ಲಿ ಶಾಲೆಗೆ ಬಾಡಿಗೆ ಕಟ್ಟಡ ಸಿಗದೆ ತೊಂದರೆಯಾಗಿತ್ತು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮನವೊಲಿಸಿ ವಸತಿ ನಿಲಯದಲ್ಲಿನ 2 ಕೊಠಡಿಗಳನ್ನು ಶಾಲೆಗಾಗಿ ಪಡೆದುಕೊಂಡಿದ್ದು, ಪರ್ಯಾಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿ, ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಬಿಇಒ ಅಶೋಕ್ ಖುದ್ದು ತಾಲೂಕು ಸಮಾಜಕಲ್ಯಾಣ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ವಾಸ್ತವ ಪರಿಸ್ಥಿತಿಯನ್ನು ವಿವರಿಸಿ ಅವರಿಂದ ಅನುಮತಿಯನ್ನು ಪಡೆದು ಮಕ್ಕಳನ್ನು ವಸತಿನಿಲಯದ ಕೊಠಡಿಗಲಿಗೆ ಸ್ಥಳಾಂತರಿಸಿದರು.
ಕಲಿಕಾ ಚೇತರಿಕೆ
ಯಶಸ್ವಿಗೊಳಿಸಿ
ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲಾಖೆ ಪ್ರಾರಂಭಿಸಿರುವ ಮಳೆಬಿಲ್ಲು 14 ಅಂಶಗಳ ಕಾರ್ಯಕ್ರಮವನ್ನು ಪ್ರತಿನಿತ್ಯ ಮಕ್ಕಳ ಕೈಯಲ್ಲಿ ಮಾಡಿಸುತ್ತಾ ಶಿಕ್ಷಕರು ಸಹ ಭಾಗವಹಿಸುವ ಮೂಲಕ ಮಕ್ಕಳಲ್ಲಿ ಕಲಿಕಾ ದೃಢತೆ ಸಾಧಿಸಿ ಎಂದು ಕಿವಿಮಾತು ಹೇಳಿದರು.
ಸರ್ಕಾರ ಮಕ್ಕಳ ಕಲಿಕೆಗೆ ಉತ್ತಮಪಡಿಸಲು ಕಲಿಕಾ ಚೇತರಿಕೆ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸಿದ್ದು ಶಿಕ್ಷಕರು ತರಬೇತಿ ಪಡೆದುಕೊಂಡಿದ್ದಾರೆ ಇದನ್ನು ಶಿಕ್ಷಕರು ತಮ್ಮ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮಕ್ಕಳಿಗೆ ಬುನಾದಿ ಕಲಿಕೆಗೆ ಒತ್ತು ನೀಡಬೇಕು ಎಂದರು.
ಪ್ರತಿಯೊಂದು ಮಗುವು ಓದು ಬರಹದಲ್ಲಿ ಮುಂದುವರಿಯುತ್ತಾ ಪಠ್ಯಕ್ಕೆ ಸಂಬಂಧಿಸಿದ ಸಾಮಥ್ರ್ಯಗಳನ್ನು ಕಲಿಯಲು ಶಿಕ್ಷಕರು ಸಹಕಾರ ನೀಡಬೇಕು ಮತ್ತು ಇಲಾಖೆಯು ಆಗಿಂದಾಗ್ಗೆ ಜಾರಿಗೊಳಿಸುವ ಆದೇಶಗಳನ್ನು ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಬೇಕೆಂದರು
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್ ಹಾಗೂ ಶಿಕ್ಷಕರು ಹಾಜರಿದ್ದರು.