ಕೋಲಾರ,ಜು.4: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಆಪತ್ಕಾಲದ ವೇಳೆ ನೆರವಿಗಾಗಿ ಸ್ಥಾಪಿಸಿರುವ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 25 ಲಕ್ಷ ರೂಗಳನ್ನು ಮಂಜೂರು ಮಾಡಿದ್ದಾರೆ.
ಜುಲೈ 1 ರಂದು ಕೋಲಾರದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಈ ಕುರಿತು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮನವಿ ಸಲ್ಲಿಸಿತ್ತು.
ಈ ಮನವಿಯನ್ನು ಆಧರಿಸಿ ಕೆ.ವಿ.ಪ್ರಭಾಕರ್ ಅವರು ಜುಲೈ 3 ರಂದು ಸೋಮವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ 25 ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದಾರೆ.
25 ಲಕ್ಷ ರೂಗಳನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಲ್ಯಾಣ ನಿಧಿಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾರ್ತಾ ಇಲಾಖೆಯ ಆಯುಕ್ತರಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಈಗಾಗಲೇ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಮತ್ತು ಅವರ ಕುಟುಂಬದವರು ನಿಧನರಾದಾಗ ಸಂಘದ ವತಿಯಿಂದಲೇ ಆಪತ್ಕಾಲದ ನೆರವನ್ನು ಒದಗಿಸುತ್ತಿದೆ.
ಕೋವಿಡ್ ನಂತರದ ದಿನಗಳಲ್ಲಿ ಪತ್ರಕರ್ತರ ಸ್ಥಿತಿಗತಿ ಮತ್ತಷ್ಟು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ ವೇಳೆ ಪತ್ರಕರ್ತರ ಮತ್ತು ಅವರ ಕುಟುಂಬದವರ ಆಪತ್ಕಾಲಕ್ಕೆ ಅನಕೂಲವಾಗುವಂತೆ 1 ಕೋಟಿ ರೂಗಳ ನಿಧಿಯನ್ನು ಸಂಗ್ರಹಿಸಲು ಪತ್ರಕರ್ತರ ಸಂಘವು ಮುಂದಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಸಂಘವು 3,30,555 ರೂಗಳನ್ನು ಸಂಗ್ರಹಿಸಿ ಡಿ.ಸಿ.ಸಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದೆ.
ಕೋಲಾರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಅನಕೂಲಕ್ಕಾಗಿ ಸ್ಥಾಪಿಸಿರುವ ಕಲ್ಯಾಣನಿಧಿಗೆ 25 ಲಕ್ಷ ರೂ ನೆರವು ಕೋರಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಹಣ ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮತ್ತು ಹಣ ಮಂಜೂರು ಮಾಡಿಸುವಲ್ಲಿ ಆಸಕ್ತಿ ವಹಿಸಿ ಶ್ರಮಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.