ಬೆಂಗಳೂರು: ರಾಜ್ಯಾದ್ಯಂತ ತೀವ್ರ ಆಸಕ್ತಿಗೆ ಕಾರಣವಾಗಿದ್ದ ಜಾತಿ ಗಣತಿ (ಕರ್ನಾಟಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ತೀವ್ರ ವಿರೋಧದ ನಡುವೆಯೂ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜು ಸಮಿತಿ ದತ್ತಾಂಶ ಪ್ರಕಾರ ಸಿದ್ದಪಡಿಸಿದ ವರದಿಯನ್ನು ಅಧಿಕೃತವಾಗಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು
ಮಧ್ಯಾಹ್ನ ವಿಧಾನಸೌಧಕ್ಕೆ ಎರಡು ಬಾಕ್ಸ್ ವರದಿ ಪ್ರತಿಗಳ ಜೊತೆಗೆ ಆಗಮಿಸಿದ ಕೆ ಜಯಪ್ರಕಾಶ್ ಹೆಗ್ಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ತೆರಳಿ ವರದಿಯ ಪ್ರತಿಯನ್ನು ಹಸ್ತಾಂತರಿಸಿದರು.
ವರದಿ ಸ್ವೀಕಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ವರದಿ ಸ್ವೀಕರಿಸಿದ್ದೇನೆ. ವರದಿಯಲ್ಲಿ ಏನಿದೆ ಎಂದು ನಾನು ನೋಡಿಲ್ಲ. ಕ್ಯಾಬಿನೆಟ್ನಲ್ಲಿ ಜಾತಿಗಣತಿ ವರದಿ ಚರ್ಚೆ ಮಾಡುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳತ್ತೇವೆ ಎಂದು ಹೇಳಿದರು.