ಭಾರಿ ಮಳೆಯಿಂದ ಚೆಲುವನಹಳ್ಳಿಯಲ್ಲಿ ಕೋಳಿಗಳ ಮಾರಣಹೋಮ : ನಷ್ಟಕ್ಕೀಡಾದ ರೈತನಿಗೆ ಸೂಕ್ತ ಪರಿಹಾರಕ್ಕೆ-ಸಿಎಂಆರ್ ಶ್ರೀನಾಥ್ ಆಗ್ರಹ

ಕೋಲಾರ:- ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಯಿಂದ 500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಮತ್ತು ರೈತರಿಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು,ಸೂಕ್ತ ಪರಿಹಾರ ಒದಗಿಸಬೇಕು ಎಂದು ಜೆಡಿಎಸ್ ಮುಖಂಡ ಹಾಗೂ ಸಮಾಜಸೇವಕ ಸಿಎಂಆರ್ ಶ್ರೀನಾಥ್ ಆಗ್ರಹಿಸಿದರು.
ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿರುವ ಚೆಲುವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಮಳೆ ನೀರು ನುಗ್ಗಿ 8500 ಕೋಳಿಗಳ ಮಾರಣಹೋಮವಾಗಿ ಕಣ್ಣೀರುಡುತ್ತಿದ್ದ ರೈತನಿಗೆ ಸಾಂತ್ವಾನ ಹೇಳಿದರಲ್ಲದೇ ಗ್ರಾಮದಲ್ಲಿ ಆಗಿರುವ ಬೆಳೆ ಹಾನಿ ವೀಕ್ಷಿಸಿದರು.
ಇಷ್ಟೊಂದು ಅಪಾರ ಹಾನಿಗೆ ರಾಜಕಾಲುವೆ ಒತ್ತುವರಿಯೇ ಕಾರಣವಾಗಿದ್ದು, ಜಿಲ್ಲಾಡಳಿತ ಕೂಡಲೇ ಸರ್ವೇ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಆಗಬಹುದಾದ ಮತ್ತಷ್ಟು ಹಾನಿಯನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಹಾನಿ ತಡೆಯುವ ಕಾರ್ಯದಲ್ಲಿ ರೈತರು ಜವಾಬ್ದಾರಿಯಿಂದ ವರ್ತಿಸಬೇಕು, ಇದು ನಿಮ್ಮದೇ ಗ್ರಾಮವಾಗಿದೆ, ರಾಜಕಾಲುವೆ,ಕೆರೆ ಒತ್ತುವರಿ ಮಾಡಿದ್ದರೆ ತಾವಾಗಿಯೇ ತೆರವುಗೊಳಿಸಿ ಇಂತಹ ಹಾನಿ ತಪ್ಪಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹಾನಿ ತಡೆಯಲು ಕೃಷಿಗೆ ನೀರು ನೀಡಿ


ಕೆಸಿ ವ್ಯಾಲಿಯಿಂದ ಕೆರೆಗಳು ಭರ್ತಿಯಾಗಿವೆ, ಇದರ ಜತೆಗೆ ಅಪಾರ ಪ್ರಮಾಣದಲ್ಲಿ ಮಳೆಯೂ ಬೀಳುತ್ತಿರುವುದರಿಂದ ನೀರಿನ ಹರಿವು ಹೆಚ್ಚಿದೆ ಎಂದ ಅವರು, ಕೆಸಿ ವ್ಯಾಲಿಯಿಂದ ತುಂಬಿರುವ ಕೆರೆಗಳಲ್ಲಿ ಮಳೆ ನೀರು ಸೇರಿಕೊಂಡಿದ್ದು, ರೈತರು ಕೃಷಿಗೆ ಈ ನೀರನ್ನು ಬಳಸಿಕೊಳ್ಳಲು ತೂಬು ತೆರೆಯುವುದರಿಂದ ಮಳೆ ವ್ಯರ್ಥವಾಗಿ ಸಮುದ್ರಕ್ಕೆ ಹೋಗುವುದನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಡಳಿತ ಬೆಳೆ ಹಾನಿಯ ಕುರಿತು ವೈಜ್ಞಾನಿವಾಗಿ ನಷ್ಟದ ಸಮೀಕ್ಷೆ ನಡೆಸಬೇಕು, ರೈತರಿಗೆ ಒಂದಿಷ್ಟು ಪುಡಿಗಾಸು ನೀಡಿ ಕೈತೊಳೆದುಕೊಳ್ಳುವ ಮನಸ್ಥಿತಿಯಿಂದ ಹೊರಬರಬೇಕು, ಆಗಿರುವ ನಷ್ಟಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಹಾನಿಗೆ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ರಾಜಕಾಲುವೆ ಸರಿಪಡಿಸಲು ನರೇಗಾ ಕಾಮಗಾರಿಯನ್ನು ಬಳಸಿಕೊಳ್ಳಬೇಕು, ಸ್ವಯಂಪ್ರೇರಿತರಾಗಿ ರೈತರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಕೂಡಲೇ ಬಿಟ್ಟುಕೊಡಬೇಕು ಎಂದರು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಸುಧಾಕರ್, ಗ್ರಾ.ಪಂ ಅಧ್ಯಕ್ಷ ರಾಜಣ್ಣ, ಸದಸ್ಯ ಎ.ಎಸ್.ನಂಜುಂಡಗೌಡ ಮತ್ತಿತರರಿದ್ದರು.