ಉಲ್ಲಾಳದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ರಥೋತ್ಸವ ; ದೇವಸ್ಥಾನದ ಮಂಡಳಿ ವಿರುದ್ಧ ಪ್ರಕರಣ ದಾಖಲು

JANANUDI.COM NETWORK

ಉಲ್ಲಾಳ,22: ಸಾವಿರಾರು ಭಕ್ತರು ಭಾಗವಹಿಸಿದ್ದ, ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಕೋವಿಡ್ -19 ರ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಂಗಳೂರಿನ ಉಲ್ಲಾಳ ಸೋಮನಾಥ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಬ್ರಹ್ಮಕಳಶೋತ್ಸವದ ಅಂಗವಾಗಿ ದೇವಾಲಯದ ಆಡಳಿತ ಮಂಡಳಿ ಸೋಮವಾರ ರಥೋತ್ಸವ ಮತ್ತು ‘ಹೋರೆ ಕಾಣಿಕೆ’ ಆಯೋಜಿಸಿದ್ದರು. ರಥೋತ್ಸವದಲ್ಲಿ ವಿವಿಧ ಸ್ಥಳಗಳಿಂದ ಸಾವಿರಾರು ಭಕ್ತರು ಸೇರಿದ್ದು ಅವರಲ್ಲಿ ಹಲವರು ಮಾಸ್ಕ್ ಧರಿಸಲಿಲ್ಲ ಹಾಗೇ ಸಾಮಾಜಿಕ ಅಂತರ ಕಾಯ್ದುಕೊಂಡಿರದೆ ನಿಯಮ ಉಲಂಘನೆಯಾಗತ್ತು.

ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ಹಾಗೂ ರಥೋತ್ಸವ ನಡೆಸಿದ್ದ ದೇವಸ್ಥಾನ ಆಡಳಿತ ಮಂಡಳಿಗೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅವರು ಉತ್ತರ ಕೋರಿ ನೋಟಿಸ್ ನೀಡಿದ್ದರು. ಇದೀಗ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಜಾತ್ರೋತ್ಸವ ಆಯೋಜಿಸಿದ್ದಕ್ಕಾಗಿ ಉಲ್ಲಾಳ ಪೊಲೀಸರು ಮಂಗಳವಾರ ಸಾಂಕ್ರಾಮಿಕ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269 ರ ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡಿದ್ದಾರೆ.