ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ :- ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಆಗಿರುವುದು ಸಾವಲ್ಲ ಅದು ಸರ್ಕಾರವೇ ಮಾಡಿರುವ ಕೊಲೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಕಿಡಿಕಾರಿದರು.
ಶ್ರೀನಿವಾಸಪುರ ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷದ ನಾಯಕರ ಪ್ರಕಾರ 34 ಜನರು ಸತ್ತಿದ್ದಾರೆ. ಆದರೆ ಸರ್ಕಾರ ಮೂರೇ ಮಂದಿ ಮೃತಪಟ್ಟಿರುವುದು ಎಂದು ಆರೋಗ್ಯ ಸಚಿವರು ಸುಳ್ಳು ಹೇಳುತ್ತಾರೆ. ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ತನಿಖೆ ಮಾಡಿಸಿ ವರದಿ ತರಸಿಕೊಳ್ಳುತ್ತೆ ಎಂದರೆ ಸರ್ಕಾರದ ನಿರ್ಲಕ್ಷತೆ ಕಾಣುತ್ತಿದೆ ಎಂದರು.
ಕೋರೊನ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸತ್ತರು ಎಂದು ಜಾರಿಗೆ ಉತ್ತರ ಸರಿಯಲ್ಲ, 79 ವರ್ಷದ ಯಡಿಯೂರಪ್ಪನವರಿಗೆ ಬದುಕಬೇಕು ಎಂಬ ಆಸೆ ಇದೆ. ಅದೇ ರೀತಿ ಸಾಮಾನ್ಯ ಮನುಷ್ಯನಿಗೆ ಬದುಕಬೇಕು ಎಂಬ ಆಸೆ ಇರಲ್ಲವೇ ಎಂದು ಪ್ರಶ್ನಿಸಿ, ಈ ಬಗ್ಗೆ ಮುಖ್ಯಮಂತ್ರಿಗೆ ಗೆ ಪತ್ರ ಬರೆದಿದ್ದೇನೆ. ಇತ್ತೀಚಿನ ದಿನಗಳಲ್ಲಿ 20-30 ವರ್ಷದವರು ಸಾಯುತ್ತಿದ್ದಾರೆ. ಅವರಿಗೆ ಬದುಕು ಆಸೆ ಇರೋದಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಪರಿಸ್ಥಿತಿಯಲ್ಲಿ ಯಾವ ಪುರುಷಾರ್ಥಕಕ್ಕಾಗಿ ಇವರು ಅಧಿಕಾರದಲ್ಲಿ ಇರಬೇಕು. ಇಷ್ಟೇಲ್ಲ ನೋವುಗಳನ್ನು ಅರಗಿಸಿಕೊಳ್ಳುವುದು ಹೇಗೆ, ಮರೆಯಲು ಸಾಧ್ಯವೇ. ಇದುವರೆಗೂ ಒಬ್ಬನ ಮೇಲೂ ಸರ್ಕಾರ ಕ್ರಮವಹಿಸಿಲ್ಲ. ಒಬ್ಬರು ಮೃತಪಟ್ಟರೂ ಇಡೀ ಕುಟುಂಬವೇ ಹೋಗುತ್ತೆ. ಕುಟುಂಬ ಪಾಲನೆ ಮಾಡೋನು ಹೋದರೆ, ಇಡೀ ಕುಟುಂಬವೇ ಬೀದಿಗೆ ಬರುತ್ತಲ್ವಾ ಎಂದು ಪ್ರಶ್ನಿಸಿದರು.
ಹಿಂದೆ ತೋಳ್ಬಲ ಇದ್ದವನಿಗೆ ಖಡ್ಗ ಬರ್ತಿತ್ತು, ಖಡ್ಗ ಬಲ ಇದ್ದವನಿಗೆ ಕಿರೀಟ ಬರುತ್ತೆ. ಕಿರೀಟ ಇದ್ದವನಿಗೆ ಸಿಂಹಾಸನ ಬರುತ್ತಿತ್ತು. ಬಲಾಢ್ಯನಿದ್ರೆ ದುರ್ಬಲರನ್ನು ಕೊಲ್ಲಬಹುದೇ, ನಿಮಗೇನು ಮನಸ್ಸಿಲ್ಲವೇ ಎಂದು ಆಕ್ರೋಶವ್ಯಕ್ತಪಡಿಸಿದರು.
ಹೈಕೋರ್ಟ್ ನಮಗೆ: ಛೀಮಾರಿ ಹಾಕಿಲ್ಲ
ನಾವು ಹೈಕೋರ್ಟ್‍ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸ್ವೀಕೃತಗೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಅಕ್ಸಿಜನ್ ಪೂರೈಕೆ ಮಾಡಲು ಆದೇಶ ಮಾಡಿದೆ. ನಮಗೆ ಛೀಮಾರಿ ಹಾಕಿದ್ದಾರೆ ಎಂಬುದು ಸುಳ್ಳು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಕಾನೂನು ಎಂದರೆ ಭಯವಿಲ್ಲದಂತಾಗಿದೆ. ರಾಜ್ಯದಲ್ಲಿ ಕೆಪಿಎಂಇ ಕಾಯ್ದೆ ಜಾರಿಯಲ್ಲಿದ್ದರೂ ಬಡವರಿಂದ ಹಣ ಸೂಲಿಗೆ ಮಾಡುತ್ತಿವೆ. ಬಡವರು ಮೃತಪಟ್ಟರೆ ನಮ್ಮ ನೋವು ಎಂದು ಗ್ರಹಿಸಬೇಕು. ರಾಜಕೀಯ ಮಾಡಬಾರದು ಎಂದು ಹೇಳಿದರು.