ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ನಗರದ 6 ಕೇಂದ್ರ ಸೇರಿದಂತೆ ಜಿಲ್ಲೆಯ ಒಟ್ಟು 15 ಕೇಂದ್ರಗಳಲ್ಲಿ ಆ.28ರ ಶನಿವಾರ ಮತ್ತು 29ರ ಭಾನುವಾರ ಎರಡು ದಿನ ಸಿಇಟಿ ಪರೀಕ್ಷೆ ಕೋವಿಡ್ ಮಾರ್ಗಸೂಚಿಯಡಿ ನಡೆಯಲಿದ್ದು, ಒಟ್ಟು 5016 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಯ ಮೊದಲ ದಿನ ಶನಿವಾರ ಬೆಳಗ್ಗೆ 10-30 ರಿಂದ 11-50ರವರೆಗೂ ಜೀವಶಾಸ್ತ್ರ, ಮಧ್ಯಾಹ್ನ 2-30 ರಿಂದ 3-50 ರವರೆಗೂ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಆ.29ರ ಭಾನುವಾರ ಬೆಳಗ್ಗೆ 10-30 ರಿಂದ 11-50 ರವರೆಗೂ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2-30 ರಿಂದ 3-50ರವರೆಗೂ ರಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.
ಜಿಲ್ಲೆಯಲ್ಲಿನ 15 ಪರೀಕ್ಷಾ ಕೇಂದ್ರ
ಕೋಲಾರದಲ್ಲಿ 6 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸರ್ಕಾರಿ ಬಾಲಕರ, ಬಾಲಕಿಯರ ಹಾಗೂ ನೂತನ ಪದವಿ ಪೂರ್ವ ಕಾಲೇಜುಗಳು, ಅಲಮಿನ್ ಪಿಯು ಕಾಲೇಜು, ಗೋಕುಲ ಪಿಯು ಕಾಲೇಜು, ಮಹಿಳಾ ಸಮಾಜ ಪಿಯು ಕಾಲೇಜುಗಳು.
ಬಂಗಾರಪೇಟೆಯಲ್ಲಿ ಬಾಲಕಿಯರ ಪಿಯು ಕಾಲೇಜು, ಕೆಜಿಎಫ್‍ನಲ್ಲಿ ಬಾಲಕರ ಪಿಯು ಕಾಲೇಜು ಮತ್ತು ಉರಿಗಾಂನ ಕೆಜಿಎಫ್ ಪಿಯು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.
ಉಳಿದಂತೆ ಮುಳಬಾಗಿಲು,ಮಾಲೂರು, ಶ್ರೀನಿವಾಸಪುರದಲ್ಲಿ ತಲಾ 2 ಕೇಂದ್ರಗಳಿದ್ದು, ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜುಗಳನ್ನು ಸಿಇಟಿ ಪರೀಕ್ಷಾ ಕೇಂದ್ರಗಳನ್ನಾಗಿಸಲಾಗಿದೆ ಎಂದು ಪಿಯು ಡಿಡಿ ರಾಮಚಂದ್ರಪ್ಪ ತಿಳಿಸಿದ್ದಾರೆ.
ಸೋಂಕಿತರಿಗೆ ಪ್ರತ್ಯೇಕ ಕೇಂದ್ರ
ಜಿಲ್ಲೆಯಲ್ಲಿ ಓರ್ವ ಕೋವಿಡ್ ಸೋಂಕಿತನಿದ್ದು, ಕೋಲಾರದ ಮೆಥೋಡಿಸ್ಟ್‍ನಲ್ಲಿ ಪ್ರತ್ಯೇಕ ಕೊಠಡಿ ಪರೀಕ್ಷೆ ಬರೆಯಲು ಸಿದ್ದಪಡಿಸಲಾಗಿತ್ತು ಆದರೆ ನಿನ್ನೆ ಮತ್ತು ಇಂದು ನಡೆಸಲಾದ ಟೆಸ್ಟ್‍ನಲ್ಲಿ ಆ ವಿದ್ಯಾರ್ಥಿಗೆ ನೆಗೆಟೀವ್ ರಿಪೋರ್ಟ್ ಬಂದಿರುವುದರಿಂದ ಕೆಜಿಎಫ್‍ನಲ್ಲೇ ಪರೀಕ್ಷೆ ಬರೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರಗಳಲ್ಲಿ ಸ್ಯಾನಿಟೈಸರ್
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸರ್ ಸಿಂಪಡಿಸಲಾಗಿದೆ, ಕೋವಿಡ್ ಮಾರ್ಗಸೂಚಿಯಡಿ ಪರೀಕ್ಷೆಗೆ ಅರ್ಧ ಗಂಟೆ ಮುಂಚೆ ಹಾಜರಿರಲು ಸೂಚಿಸಲಾಗಿದ್ದು, ಆಶಾ ಕಾರ್ಯಕರ್ತರನೆರವಿನಿಂದ ಪ್ರತಿ ಕೇಂದ್ರದಲ್ಲೂ ಪರೀಕ್ಷೆಗೆ ಬರುವ ಸಿಬ್ಬಂದಿ,ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
144ನೇ ಸೆಕ್ಷನ್ನಿ ಷೇದಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳ ಸುತ್ತ 200ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಕೇಂದ್ರಗಳಲ್ಲಿ ಸುರಕ್ಷತೆಗೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರನ್ನು ವಿದ್ಯಾರ್ಥಿಗಳೇ ತರಲು ಸೂಚಿಸಿದ್ದು, ಅನಿವಾರ್ಯ ಸಂದರ್ಭದಲ್ಲಿ ಕೇಂದ್ರಗಳಲ್ಲಿ ಬಳಸಿ ಬಿಸಾಡುವ ಲೋಟಗಳಲ್ಲಿ ನೀರು ಒದಗಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಇಲಾಖೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲಾ ಸಿದ್ದತೆ ನಡೆಸಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದ್ದು, ಶೌಚಾಲಯ, ನೀರಿನ ವ್ಯವಸ್ಥೆ, ಸ್ವಚ್ಚತೆ ಬಗ್ಗೆಯೂ ಗಮನಹರಿಸಲಾಗಿದೆ ಎಂದು ತಿಳಿಸಿದ್ದಾರೆ.