ಕೋಲಾರ: ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಉಂಟಾಗುವ ಅನಾಹುತ ತಪ್ಪಿಸಲು, ಆಶಾ ಕಾರ್ಯಕರ್ತೆಯರು ಐದು ವರ್ಷದೊಳಗಿನ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಓಆರ್ಎಸ್ ನೀಡಿ ಮಕ್ಕಳಿಗೆ 14 ದಿನಗಳವರೆಗೆ ಜಿಂಕ್ ದ್ರಾವಣ ಕೊಟ್ಟು ಸೂಕ್ತ ಆಹಾರ ಪದಾರ್ಥಗಳನ್ನು ಶಿಶುವಿಗೆ ನೀಡುವ ಕುರಿತು ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಪದ್ಮ ಬಸವಂತಪ್ಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ (IDCF) 2023 ರ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಡುಗೆಯವರಿಗೆ ಅಂಗನವಾಡಿಯಲ್ಲಿ ಅಂಗನವಾಡಿ ಸಹಾಯಕಿಯರಿಗೆ ಹಾಗೂ ಮಕ್ಕಳಿಗೆ ವೈಜ್ಞಾನಿಕವಾಗಿ ಕೈತೊಳೆಯುವ ಬಗ್ಗೆ ಹಾಗೂ ಶೌಚಾಲಯ ಬಳಸುವ ಬಗ್ಗೆ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಂಗನವಾಡಿ ಶಿಕ್ಷಕಿಯರು ಮಾರ್ಗದರ್ಶನ ಹಾಗೂ ತರಬೇತಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ORS ಬಳಸುವುದು ಹಾಗೂ ಅದರ ಪ್ರಯೋಜನದ ಬಗ್ಗೆ ಮಕ್ಕಳಿಗೆ ವಿಡಿಯೋ ಪ್ರದರ್ಶನ ನೀಡಿ ಅರಿವು ಮೂಡಿಸಿ ಎಂದು ಸೂಚನೆ ನೀಡಿದರು.
ತೀವ್ರತರ ಅತಿಸಾರ ನಿಯಂತ್ರಣ ಬಗ್ಗೆ ಶಾಲಾ ಕಾಲೇಜು ಮಕ್ಕಳಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ ಎಂದು ಹೇಳಿದರು.
ಶಾಲಾ ಕಾಲೇಜು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಥಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
RCH ಅಧಿಕಾರಿ ವಿಜಯಕುಮಾರಿ ಮಾತನಾಡಿ ಒ.ಆರ್.ಎಸ್. ದ್ರಾವಣ ಬಳುಸುವ ವಿಧಾನದ ಕುರಿತು ಸಭೆಗೆ ತಿಳಿಸಿದರು. ಒ.ಆರ್.ಎಸ್. ದ್ರಾವಣ ತಯಾರಿ ಮೊದಲು ಕೈಗಳನ್ನು ಚೆನ್ನಾಗಿ ತೊಳೆದು ಶುದ್ಧ ಪಾತ್ರೆಯಲ್ಲಿ 1 ಲೀ. ಶುದ್ಧ ಕುಡಿಯುವ ನೀರನ್ನು (ಕುದಿಸಿ ಆರಿಸಿದ ನೀರು) ತೆಗೆದು ಕೊಂಡು ಒಂದು ಒ.ಆರ್.ಎಸ್ ಪ್ಯಾಕೆಟ್ನ ಎಲ್ಲ ಮಿಶ್ರಣವನ್ನು ಆ ನೀರಿನಲ್ಲಿ ಬೆರೆಸಿ ನೀರನ್ನು ಸ್ವಚ್ಛ ಚಮಚದಿಂದ ಕಲಕಿ ಪಾತ್ರೆಯನ್ನು ಮುಚ್ಚಿಡಿ. ಈ ರೀತಿ ತಯಾರಿಸಿದ ಒ.ಆರ್. ಎಸ್. ದ್ರಾವಣವನ್ನು ಮಕ್ಕಳಿಗೆ ಪದೇ ಪದೆ ನೀಡಿ. – 2 ತಿಂಗಳವರೆಗೆ – 5 ಚಮಚ ದ್ರಾವಣ. 2 ತಿಂಗಳಿಂದ – 2 ವರ್ಷಗಳವರೆಗೆ – 1/4 – 1/2 ಕಪ್ ದ್ರಾವಣ 2 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ -1/2 – 1 ಕಪ್. ಮಗುವು ತಿಳಿಯಾದ, ಸಾಕಷ್ಟು ಪ್ರಮಾಣದಲ್ಲಿ ಮೂತ್ರ ಮಾಡುವವರೆಗೂ ಒ.ಆರ್. ಎಸ್ ದ್ರಾವಣ ನೀಡಿ. ಹೆಚ್ಚು ಕುಡಿಯುವ ಮಗುವಿಗೆ ಹೆಚ್ಚು ಕುಡಿಸಬೇಕು.
ನೀರಿನ ಮಾಲಿನ್ಯವನ್ನು ತಡೆಗಟ್ಟುವ ವಿಧಾನಗಳು ತಿಳಿಸಿದರು
ನೀರನ್ನು ಯಾವಾಗಲೂ ಕುದಿಸಿ ಆರಿಸಿ ಕುಡಿಯುವುದು.
ಕುಡಿಯುವ ನೀರಿನ ಮೂಲದಿಂದ ಕನಿಷ್ಠ 60 ಅಡಿ ಅಂತರದಲ್ಲಿ ಯಾವುದೇ ತ್ಯಾಜ್ಯ ನೀರು, ತ್ಯಾಜ್ಯ ವಸ್ತು, ಲ್ಯಾಟ್ರಿನ್ ಪಿಟ್ ಇರದಂತೆ ಮಾಡಿಕೊಳ್ಳುವುದು.
ಸಾರ್ವಜನಿಕರು ಕುಡಿಯುವ ನೀರಿನ ಮೂಲಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಿ ಕ್ಲೋರಿನ್/ ಬ್ಲೀಚಿಂಗ್ ಪೌಡರ್ ಹಾಕುವುದು ಬೇಕು ಎಂದು ಹೇಳಿದರು.
ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ: ಜಗದೀಶ್,DDPI ಕೃಷ್ಣ ಮೂರ್ತಿ,ಡಾ: ವಿಜಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ನಾರಾಯಣಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.