ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ಭಾರತಕ್ಕೆ 12 ದೇಶಗಳಿಂದ ತೆರಿಗೆ ರಹಿತ ಹಾಲು ಹರಿಸಲು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಜ್ಜಾಗಿರುವುದನ್ನು ಕೈಬಿಡುವ ಮೂಲಕ ದೇಶದ ಡೈರಿ ಉದ್ಯಮಕ್ಕೆ ಬೀಳಲಿರುವ ಭಾರೀ ಹೊಡೆತವನ್ನು ತಪ್ಪಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ಎಡಿಸಿ ಡಾ.ಸ್ನೇಹಾ ಮೂಲಕ ಕೇಂದ್ರ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹಾಲು ಮತ್ತಿತರ ಡೈರಿ ಪದಾರ್ಥಗಳನ್ನು ತೆರಿಗೆಯಿಲ್ಲದೆ ದೇಶದೊಳಗೆ ಬಿಟ್ಟುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ರೈತರ ಪಾಲಿಗೆ ಗಂಡಾಂತರಕಾರಿಯಾಗುವುದು ನಿಶ್ಚಿತ. ಈಗಾಗಲೇ ಒಪ್ಪಂದಕ್ಕೆ ಸರ್ಕಾರ ಸಜ್ಜಾಗಿದ್ದು, ಇದರಿಂದಾಗಿ ಸದ್ಯ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಕಂಗಾಲಾಗಿರುವ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಅತಿವೃಷ್ಠಿಗೆ ಒಳಗಾಗುವ ಆತಂಕ ಮನೆ ಮಾಡಿರುವುದಾಗಿ ಹೇಳಿದರು.
ಕರ್ನಾಟಕದಲ್ಲಿ ಪ್ರತಿನಿತ್ಯ 75 ಲಕ್ಷ ಲೀಟರ್‍ನಷ್ಟು ಹಾಲು ಉತ್ಪಾದನೆಯಾಗುತಿದ್ದು, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಕುಡಿಯಲು ದೊಡ್ಡ ಪ್ರಮಾಣದಲ್ಲಿ ಹಾಲು ನೀಡಿದರೂಇನ್ನೂ ಹಾಲು ಉಳಿಕೆಯಾಗುತ್ತಿದೆ. ರಾಜ್ಯದ ಪರಿಸ್ಥಿತಿಯೇ ಹೀಗಿರುವಾಗ ಹಾಲು ಮತ್ತಿತರ ಹಾಲಿನ ಉತ್ಪನ್ನಗಳ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿರುವ ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಪರಿಸ್ಥಿತಿ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಗುಜರಾತ್, ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳು ಹೆಚ್ಚಿನ ಹಾಲನ್ನು ಉತ್ಪಾದಿಸುತ್ತಿದ್ದು, ತಮ್ಮಲ್ಲಿ ಲಭ್ಯವಿರುವ ಹಾಲಿಗೇ ಸೂಕ್ತ ಮಾರುಕಟ್ಟೆ ಲಭ್ಯವಾಗದ ಪರಿಸ್ಥಿತಿಯನ್ನು ಎದುರಿಸುತ್ತಿವೆ.
ಇದ್ಯಾವುದನ್ನೂ ಲೆಕ್ಕಿಸದೆ 12 ದೇಶಗಳಿಂದ ತೆರಿಗೆ ರಹಿತವಾಗಿ ಹಾಲು ಮತ್ತಿತರ ಡೈರಿ ಪದಾರ್ಥಗಳನ್ನು ತರಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿರುವುದು ಖಂಡನೀಯವಾಗಿದೆ. ಒಪ್ಪಂದವನ್ನು ವಿರೋಧಿಸಿ ಪ್ರಧಾನಿ ಮೋದಿಗೆ 2 ಲಕ್ಷ ಮಹಿಳೆಯರು ಪತ್ರ ಬರೆದಿದ್ದು, ಎಚ್ಚೆತ್ತುಕೊಂಡು ಒಪ್ಪಂದವನ್ನು ಕೈಬಿಡುವುದು ಸೂಕ್ತವೆಂದು ಆಗ್ರಹಿಸಿದರು.
ಯಾವ ಸಮಸ್ಯೆಗಳನ್ನೂ ಪರಿಗಣಿಸದೆ ರೈತ, ಹೈನೋದ್ಯಮ ವಿರೋಧಿ ಧೋರಣೆ ಅನುಸರಿಸಿದರೆ, ಈಗಾಗಲೇ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ನಡೆಯುತ್ತಿರುವ ದೆಹಲಿ ರೈತರ ಮಾದರಿಯಲ್ಲೇ ದೇಶದಾದ್ಯಂತ ಉಗ್ರ ಹೋರಾಟಗಳನ್ನು ನಡೆಸುವ ಜೊತೆಗೆ ಜಾನುವಾರುಗಳ ಸಮೇತ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಡಿಸಿ ಡಾ.ಸ್ನೇಹಾ, ತಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಹೆಬ್ಬಣಿ ಆನಂದರೆಡ್ಡಿ, ಚಾಂದ್‍ಪಾಷ, ಚಲಪತಿ, ಮೂರಂಡಹಳ್ಳಿ ಶಿವಾರೆಡ್ಡಿ, ಮರಗಲ್ ಮುನಿಯಪ್ಪ, ವೇಣು, ಕೇಶವ, ನವೀನ್, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.