

ಕುಂದಾಪುರ, 21 ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಫಾ |ಸ್ಟ್ಯಾನಿ ತಾವ್ರೋರವರ 75ನೇ ಹುಟ್ಟುಹಬ್ಬವನ್ನು ಆ. 20 ರಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಫಾ|ಸ್ಟ್ಯಾನಿ ತಾವ್ರೋರವರು ತಮ್ಮ 75ನೇ ಜನ್ಮ ದಿವಸದ ಸಂದರ್ಭದಲ್ಲಿ ಕ್ರತಜ್ಞತಾ ಪೂರ್ವಕ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ಫಾ|ಅಶ್ವಿನ್ ಆರಾನ್ನಾ ಸಹ ಯಾಜಕರಾಗಿ ದಿವ್ಯ ಬಲಿ ಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತಾಡಿದ ಫಾ|ಸ್ಟ್ಯಾನಿ ತಾವ್ರೋರವರು, “ನನ್ನ ಜೀವನದ 75 ವರ್ಷಗಳು ಅದು ಹೇಗೆ ಕಳೆದು ಹೋದವು ಎಂದು ನನಗೆ ತಿಳಿಯಲೇ ಇಲ್ಲ, ಈ 75 ವರ್ಷಗಳಲ್ಲಿ ಹಲವು ಕಾರ್ಯ ಸಾಧನೆಗಳನ್ನು ಮಾಡಲು ನನಗೆ ಸಾಧ್ಯವಾಗಿದೆ, ಆದರೆ ಇವೆಲ್ಲದರ ಹಿಂದೆ ಒಂದು ಬಲವಾದ ಕೈ ಇದೆ, ಅದುವೇ ಭಗವಂತನ ಕೈ, ಆತನ ಅನುಗ್ರಹದಿಂದಾಗಿ ನಾನು ಈ ಸಾರ್ಥಕತೆಯ ತುಂಬು ಜೀವನವನ್ನು ಜೀವಿಸಲು ಸಾಧ್ಯವಾಗಿದೆ, ಆದ್ದರಿಂದ ಭಗವಂತನಿಗೆ ನಾನು ಅನಂತ ವಂದನೆಯನ್ನು ಸಲ್ಲಿಸುತ್ತೇನೆ”. ಎಂದರು.
ದಿವ್ಯ ಬಲಿಪೂಜೆಯ ನಂತರ ಫಾ|ಸ್ಟ್ಯಾನಿ ತಾವ್ರೋರವರು ತಮ್ಮ 75ನೇ ಹುಟ್ಟುಹಬ್ಬದ ಕೇಕನ್ನು ಸಮಸ್ತ ಜನರ ಸಮ್ಮುಖದಲ್ಲಿ ಕತ್ತರಿಸಿದರು. ಈ ಸಂದರ್ಭದಲ್ಲಿ ಚರ್ಚಿನ ಗಾಯನ ಮಂಡಳಿಯಿಂದ ಅಭಿನಂದನಾ ಗೀತೆಯನ್ನು ಹಾಡಲಾಯಿತು. ಸಹಾಯಕ ಧರ್ಮಗುರುಗಳಾದ ಫಾ|ಅಶ್ವಿನ್ ಆರಾನ್ನಾರವರು ಫಾ|ಸ್ಟ್ಯಾನಿ ತಾವ್ರೋರವರ ಬಗ್ಗೆ ಹಿತನುಡಿಗಳನ್ನಾಡಿ, ಅವರ ಜೀವನಶೈಲಿ, ಶಿಸ್ತುಬದ್ಧತೆ, ಧಾರ್ಮಿಕಶ್ರದ್ಧೆ, ಸಾಮಾಜಿಕ ಕಳಕಳಿ ಹಾಗೂ ಕಾರ್ಯವೈಖರಿಯ ಗುಣಗಾನವನ್ನು ಮಾಡಿದರು ಮತ್ತು ಫಾ|ಸ್ಟ್ಯಾನಿ ತಾವ್ರೋರವರಿಗೆ ಹೂಗುಚ್ಚವನ್ನಿತ್ತು ಶುಭಾಶಯ ಕೋರಿದರು.
ತದನಂತರ ತಮ್ಮ ಮನದಾಳದ ಮಾತುಗಳನ್ನಾಡಿದ ಫಾ|ಸ್ಟ್ಯಾನಿ ತಾವ್ರೋರವರು,”ಈ ನನ್ನ 75 ವರ್ಷದ ಸಾರ್ಥಕ ಬದುಕಿನಲ್ಲಿ ದೇವರು ನನಗೆ ಹಲವು ಉನ್ನತ ಹುದ್ದೆಗಳನ್ನು ದಯಪಾಲಿಸಿದ್ದಾರೆ, ಆದರೆ ಹುದ್ದೆಗಳಲ್ಲಿದ್ದು ನಾನು ಮಾಡಿದ ಸಾಧನೆಗಳ ಬಗ್ಗೆ ಹೇಳಿಕೊಳ್ಳಲು ನಾನು ಬಯಸುವುದಿಲ್ಲ. ನಾನು ಕುಂದಾಪುರಕ್ಕೆ ಬಂದ ನಂತರ ಇಲ್ಲಿನ ಜನರ ಸಹಕಾರದಿಂದ ಹಲವು ಪ್ರಗತಿಪರ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಇಲ್ಲಿನ ಜನರಾದ ನೀವು ವಿಶಾಲ ಹೃದಯಿಗಳು, ದೇವರಲ್ಲಿ ಅತೀವ ಶ್ರದ್ಧೆ ಭಕ್ತಿಯುಳ್ಳವರು, ನೀವು ನನ್ನ ಮೇಲೆ ತೋರಿದ ಪ್ರೀತ್ಯಾದರ ಹಾಗೂ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ನಿಮ್ಮ ಒಳ್ಳೆಯತನಕ್ಕಾಗಿ ನಿಮ್ಮ ಮೇಲೆ ದೇವರ ಆಶೀರ್ವಾದಗಳನ್ನು ಬೇಡಿಕೊಳ್ಳುತ್ತೇನೆ. ರೋಜರಿ ಮಾತೆಯು ನಿಮ್ಮನ್ನು ಸದಾ ಹರಸಲಿ. ನನ್ನ ಕೊನೆಯ ಉಸಿರಿರುವವರೆಗೆ ಯಾಜಕನಾ ಗಿ ದೇವರ ಸೇವೆಯನ್ನು ಮಾಡುತ್ತಾ, ನನ್ನ ಪಾಲಿಗೆ ಬರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ, ಇದಕ್ಕೆ ಬೇಕಾದ ಶಕ್ತಿ ಮತ್ತು ಸಾಮರ್ಥ್ಯವನ್ನು ಆ ದೇವರು ನನಗೆ ಕರುಣಿಸಲಿ ಎಂದು ನನಗಾಗಿ ನೀವು ಕೂಡ ಪ್ರಾರ್ಥಿಸಿರಿ’ ಎಂದರು.
ಹೋಲಿ ರೋಜರಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ಶಾಲೆಟ್ ರೆಬೆಲ್ಲೊ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಶ್ರೀಮತಿ ಆಶಾ ಕರ್ವಾಲ್ಲೊ ವಂದಿಸಿದರು. ಈ ಸಂದರ್ಭದಲ್ಲಿ 20 ಆಯೋಗಗಳ ಸಂಚಾಲಕಿ ಶ್ರೀಮತಿ ಪ್ರೇಮಾ ಡಿಕುನ್ಹಾ, ಸೈಂಟ್ ಜೋಸೆಫ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಸುಪ್ರಿಯಾ, ಧರ್ಮಭಗಿನಿಯರು, ಗುರಿಕಾರರು, ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಚರ್ಚಿನ ಧರ್ಮಪ್ರಜೆಗಳು ಉಪಸ್ಥಿತರಿದ್ದು ಫಾ|ಸ್ಟ್ಯಾನಿ ತಾವ್ರೋರವರಿಗೆ 75ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

























