ಕೋಲಾರ:- ಸರ್ವರಿಗೂ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ಅನ್ನ ನೀಡುವ ರೈತರ ಬಾಳು ಹಸನಾಗಿಸುವ ಸಂಕಲ್ಪದೊಂದಿಗೆ ನಾನು ಶಾಸಕನಾಗಿ ಬದ್ದತೆಯಿಂದ ಕೆಲಸ ಮಾಡುವೆ ಎಂದು ನೂತನ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಘೋಷಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಸ್ವತಃ ಸಿಹಿ ತಿನ್ನಿಸಿ, ಶಿಕ್ಷಕರಿಗೂ ಸಿಹಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡರೆ ಮಾತ್ರವೇ ಸರ್ವರಿಗೂ ಶಿಕ್ಷಣ ಸಿಗಲು ಸಾಧ್ಯ ಎಂದ ಅವರು, ವಾರಕ್ಕೊಂದು ದಿನ ಒಂದು ಸರ್ಕಾರಿ ಶಾಲೆಗೆ ಹೋಗಿ ಒಂದು ಗಂಟೆ ಮಕ್ಕಳೊಂದಿಗೆ ಕಳೆದರೆ ಸಾಕು ಸಾಕ್ಷಾತ್ ದೇವರ ದರ್ಶನ,ದೇವಾಲಯಕ್ಕೆ ಹೋದ ನೆಮ್ಮದಿ,ರೈತರಿಗೆ ಕೈಮುಗಿದರೆ ದೇವರಿಗೆ ಕೈಮುಗಿದಂತೆ ಭಾಸವಾಗುತ್ತದೆ ಎಂದರು.
ಮುಳಬಾಗಿಲಿನಂತೆ ಇಲ್ಲೂ ಶಾಲೆ ಅಭಿವೃದ್ದಿ
ಮುಳಬಾಗಿಲು ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನೀಡಿದ ಕೊಡುಗೆ ಕೋಲಾರ ತಾಲ್ಲೂಕಿನಲ್ಲೂ ಮುಂದುವರೆಸುವೆ ಎಂದು ತಿಳಿಸಿದ ಅವರು, ತಮ್ಮ ಸಮಾಜಸೇವೆಯನ್ನು ಶಾಲೆಯೊಂದರ ಮಕ್ಕಳಿಗೆ ತಟ್ಟೆ ಲೋಟ ನೀಡುವ ಮೂಲಕ ಆರಂಭಿಸಿದ್ದು, ನಂತರ ಇಡೀ ತಾಲ್ಲೂಕಿನ ಪ್ರತಿ ಸರ್ಕಾರಿ ಶಾಲೆಯ ಮಕ್ಕಳಿಗೂ ತಟ್ಟೆ ಲೋಟ ಕೊಟ್ಟಿದ್ದಾಗಿ ಸ್ಮರಸಿಕೊಂಡರು.
ಪೋಷಕರು ಸರ್ಕಾರಿ ಶಾಲೆಗಳ ಕುರಿತ ಕೀಳಿರಿಮೆ ಬಿಡಬೇಕು, ದೇಶದ ಮಹಾನ್ ಸಾಧಕರಾದ ವಿವೇಕಾನಂದರು, ಕಲಾಂ,ಕೆ.ಸಿ.ರೆಡ್ಡಿ ಎಲ್ಲರೂ ಈ ಸರ್ಕಾರಿ ಶಾಲೆಗಳಲ್ಲಿಯೇ ಓದಿದವರು ಎಂಬುದನ್ನು ಮರೆಯಬಾರದು, ಅದರಲ್ಲೂ ಪ್ರೌಢಶಾಲಾ ಶಿಕ್ಷಣ ಅಡಿಪಾಯವಿದ್ದಂತೆ, ಮಕ್ಕಳು ಮೈಮರೆಯದೇ ಆಸಕ್ತಿಯಿಂದ ಕಲಿಯರಿ, ನನಗೆ ಶಿಕ್ಷಣ ನೀಡಿದ ಬಿ.ಟಿ.ಕೃಷ್ಣಪ್ಪ ಎಂಬ ಮೇಸ್ಟ್ರು ಮಾಡಿದ ಪಾಠ ಇಂದಿಗೂ ಮರೆತಿಲ್ಲ ಎಂದು ಸ್ಮರಿಸಿದರು.
ಮಾದರಿಶಾಲೆಯಾಗಿ ಮಾರ್ಪಾಟು-ಭರವಸೆ
ನಾನು ಶಾಸಕನಾದ ನಂತರ ಕೋಲಾರ ತಾಲ್ಲೂಕಿನಲ್ಲಿ ಭೇಟಿ ನೀಡುತ್ತಿರುವ ಮೊದಲ ಶಾಲೆ ಮೊದಲ ಕಾರ್ಯಕ್ರಮ ಇದು, ಈ ನೆನಪನ್ನು ಮರೆಯಲ್ಲ, ವಾರಕ್ಕೊಮ್ಮೆ ನಿಮ್ಮ ಶಾಲೆಗೆ ಬಂದು ಒಂದು ಗಂಟೆ ಇದ್ದು ಹೋಗುವೆ, ಈ ಶಾಲೆಯ ಸಮಗ್ರ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ಒದಗಿಸಿ ಮಾದರಿ ಶಾಲೆಯಾಗಿಸುವೆ, ಈ ಶಾಲೆ ನೋಡಿ ಇತರೆ ಶಾಲೆಗಳು ಅಭಿವೃದ್ದಿಗೆ ಮುನ್ನುಡಿ ಇಡುವಂತೆ ಮಾಡುವೆ, ವಿಶ್ವದ ಟಾಪ್ 100 ಶ್ರೀಮಂತರಲ್ಲಿ ಕನಿಷ್ಟ 10 ಮಂದಿ ನನ್ನ ಸ್ನೇಹಿತರಿದ್ದಾರೆ, ಅವರ ನೆರವು ಹರಿಸುವೆ ಎಂದರು.
ಮಣ್ಣಿನ ಗುಣದಲ್ಲಿ ಸಾಧನೆ,ಸಾಧಕರು
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‍ಕುಮಾರ್ ಮಾತನಾಡಿ, ಕೋಲಾರ ಮಣ್ಣಿನ ಗುಣವೋ ಏನೋ,ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪಡೆದ ವಿಶ್ವೇಶ್ವರಯ್ಯ,ಸಿಎನ್‍ಆರ್ ರಾವ್ ಇಬ್ಬರೂ ಅವಿಭಜಿತ ಕೋಲಾರದವರು,ಮೊದಲ ಸಿಎಂ ಕೆ.ಸಿ.ರೆಡ್ಡಿ,ಮಾಸ್ತಿ,ಡಿವಿಜಿ,ಇಂಪೋಸೀಸ್ ನಾರಾಯಣಮೂರ್ತಿ,ನ್ಯಾಯಮೂರ್ತಿಗಳಾದ ಗೋಪಾಲಗೌಡ ಈ ಮಹಾನ್ ಸಾಧಕರೆಲ್ಲಾ ನಮ್ಮ ಜಿಲ್ಲೆಯವರೇ ಸರ್ಕಾರಿ ಶಾಲೆಯಲ್ಲೇ ಓದಿದವರು ಎಂದರು.
ಸರ್ಕಾರಿ ಶಾಲೆಗಳನ್ನು ಆಕರ್ಷಣೀಯಗೊಳಿಸಿ, ಪೋಷಕರಲ್ಲಿ ನಂಬಿಕೆ ಬಲಗೊಳಿಸಿ, ದಾಖಲಾತಿ ಹೆಚ್ಚಿಸಿ, ಶಿಕ್ಷಣ ಪ್ರೇಮಿಯಾಗಿ ಸರ್ಕಾರದ ಅನುದಾನದ ಜತೆಗೆ ಶಾಲೆ,ಮಕ್ಕಳಿಗಾಗಿ ವೈಯಕ್ತಿಕವಾಗಿಯೂ ಅಪಾರ ನೆರವು ನೀಡುವ ಉದಾರ ಗುಣ ಹೊಂದಿರುವ ಶಾಸಕ ಕೊತ್ತೂರು ಮಂಜುನಾಥ್‍ರ ನೆರವು ಪಡೆದು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮಪಡಿಸೋಣ, ಇಲ್ಲಿಂದ ಐಎಎಸ್,ಐಪಿಎಸ್,ಕೆಎಎಸ್ ಸಾಧಕರನ್ನು ದೇಶಕ್ಕೆ ನೀಡೋಣ ಎಂದರು.
ಗುಣಾತ್ಮಕ ಶಿಕ್ಷಣ ಶೇ.100 ಗುರಿ
ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನಲ್ಲಿ 59876 ಮಕ್ಕಳು ಓದುತ್ತಿದ್ದು, ಈ 2023-24ನೇ ಸಾಲನ್ನು ಗುಣಾತ್ಮಕ ಶೈಕ್ಷಣಿಕವರ್ಷವಾಗಿ ಆಚರಿಸುತ್ತಿದ್ದು, ಈ ಬಾರಿ ಮೂರು ಗುರಿ ಹೊಂದಲಾಗಿದೆ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೇ.100 ಫಲಿತಾಂಶ ಸಾಧನೆ, ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಗಳಿಕೆ, ಫಲಿತಾಂಶದಲ್ಲಿ ರಾಜ್ಯದಲ್ಲಿ ಈಗ 6ನೇ ಸ್ಥಾನದಲ್ಲಿರುವ ನಾವು ಕನಿಷ್ಟ 1 ಅಥವಾ 2ನೇ ಸ್ಥಾನಕ್ಕೆ ಬರಬೇಕು ಈ ಸಂಕಲ್ಪ,ಗುರಿಯೊಂದಿಗೆ ಕೆಲಸ ಮಾಡೋಣ ಎಂದರು.
ಈ ಸಾಲಿನಲ್ಲಿ ಜಿಲ್ಲೆಗೆ ಶೇ.96 ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಿದೆ, ಜನರಲ್ಲಿ ಸರ್ಕಾರಿ ಶಾಲೆಗಳ ಕುರಿತಾದ ದೃಷ್ಟಿಕೋನ ಬದಲಾಗಬೇಕು, ಶಿಕ್ಷಣ ಪ್ರೇಮಿಯಾಗಿರುವ ಶಾಸಕರು,ವಿಧಾನಪರಿಷತ್ ಸದಸ್ಯರು ತಾಲ್ಲೂಕಿನಲ್ಲಿನ ಶಾಲಾ ಕಟ್ಟಡಗಳ ದುರಸ್ತಿ,ಸೌಲಭ್ಯಗಳಿಗೆ ಒತ್ತು ನೀಡಲಿದ್ದಾರೆ,ಕಳೆದ ವರ್ಷ `ಶಾಲೆಯತ್ತ ಸಮುದಾಯ’ ಕಾರ್ಯಕ್ರಮದಡಿ ಶೇ.80 ಶಾಲೆಗಳಿಗೆ ಸುಣ್ಣಬಣ್ಣವಾಗಿದೆ, ಈ ಬಾರಿ ಅತಿಥಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಕ್ರಮವಹಿಸಿದ್ದು, ಶಿಕ್ಷಕರ ಹುದ್ದೆ ಖಾಲಿ ಇರುವ ಶಾಲೆ ಇಲ್ಲದಂತೆ ಕ್ರಮವಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್, ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ, ಪೂರ್ವಪ್ರಾಥಮಿಕ ಶಿಕ್ಷಣ ಸಿಗುವಂತಾದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ತಿಳಿಸಿ, ಶಾಲೆಗೆ ಅಗತ್ಯ ಮೂಲಸೌಲಭ್ಯಗಳ ಕುರಿತಾದ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನಂದಿನಿ ಪ್ರವೀಣ್, ಶಾಸಕರ ಸ್ನೇಹಿತ ನರಸಿಂಹ,ಗ್ರಾ.ಪಂ ಅಧ್ಯಕ್ಷರುಗಳಾದ ರಾಜಣ್ಣ, ವಕ್ಕಲೇರಿ ಮುರಳಿ,ಮುಖಂಡ ಸೊಣ್ಣೇಗೌಡ, ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್,ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಸದಸ್ಯರಾದ ರಾಮಚಂದ್ರಪ್ಪ, ಮಂಜುನಾಥ್, ಮಾಜಿಅಧ್ಯಕ್ಷ ಮುಳ್ಳಹಳ್ಳಿ ಮಂಜುನಾಥ್, ಗ್ರಾ.ಪಂ ಪಿಡಿಒ ಶಾಲಿನಿ, ಮಾಜಿ ಉಪಾಧ್ಯಕ್ಷ ವೈ.ಮುನಿಯಪ್ಪ, ಮುಖಂಡರಾದ ಹೆಚ್.ನಾರಾಯಣಪ್ಪ, ಚಿಕ್ಕವೆಂಕಟಪ್ಪ,ಗುಟ್ಟಹಳ್ಳಿ ಶ್ರೀನಿವಾಸ್, ಗಜೇಂದ್ರ, ಹರ್ಷವರ್ಧನ್, ನರೇಂದ್ರ, ಬಿಆರ್‍ಸಿ ಪ್ರವೀಣ್, ಇಸಿಒಗಳಾದ ವೆಂಕಟಾಚಲಪತಿ, ಕೆ.ಶ್ರೀನಿವಾಸ್, ಸಿಆರ್‍ಪಿ ಸೌಮ್ಯಲತಾ, ಶಿಕ್ಷಕರಾದ ಸಿದ್ದೇಶ್ವರಿ,ಗೋಪಾಲಕೃಷ್ಣ,ಭವಾನಿ, ವೆಂಕಟರೆಡ್ಡಿ, ಶ್ರೇತಾ,ಸುಗುಣಾ,ಲೀಲಾ,ಫರೀದಾ, ಶ್ರೀನಿವಾಸಲು, ಚಂದ್ರಶೇಖರ್ ಮತ್ತಿತರರಿದ್ದರು.