

ಕುಂದಾಪುರ, ಎ.18: ಪಿಯುಸ್ ನಗರ ಚರ್ಚಿನ ಧರ್ಮಗುರು ಆಲ್ಬರ್ಟ್ ಕ್ರಾಸ್ತಾರ ಗುರುದೀಕ್ಷೆಯ 26 ನೇ ವರ್ಷದ ಸಂಭ್ರಮವನ್ನು ಎ.17 ರಂದು ಪಿಯುಸ್ ನಗರ ಧರ್ಮಕೇಂದ್ರದವರು ಆಚರಿಸಿದರು.
ವಂ|ಆಲ್ಬರ್ಟ್ ಕ್ರಾಸ್ತಾ ಅವರು, ವಂ|ವಾಲ್ಟರ್ ಡಿಮೆಲ್ಲೊ ಇವರ ಸಹಭಾಗಿತ್ವದೊಂದಿಗೆ ಕ್ರತಜ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿದರು. ಧರ್ಮಕೇಂದ್ರದ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ಧರ್ಮಗುರುಗಳ ಒಳಿತಿಗಾಗಿ ಪ್ರಾರ್ಥಿಸಿ ಶುಭ ಹಾರೈಸಿದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಧರ್ಮಗುರುಗಳು ಕೇಕ್ ಕತ್ತರಿಸಿ, ತಮ್ಮ ಸಂಭ್ರಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆಮ್ಸ್ ಡಿಮೆಲ್ಲೊ ಎಲ್ಲರ ಪರವಾಗಿ ಶುಭ ಕೋರಿದರು ಹೂ ಗುಚ್ಚ ನೀಡಿ ಗೌರವಿಸಿದರು. ಚರ್ಚಿನ ಗಾಯನ ಮಂಡಳಿ ಸದಸ್ಯರು ಶುಭಾಶಯ ಗೀತೆಯನ್ನು ಹಾಡಿದರು.
ಧರ್ಮಗುರು ಆಲ್ಬರ್ಟ್ ಕ್ರಾಸ್ತಾ ಮಾತನಾಡಿ ತಮ್ಮ ಸಂತೋಷವನ್ನು ಮನದಾಳದ ಮಾತುಗಳಿಂದ ವ್ಯಕ್ತಪಡಿಸುತ್ತಾ, ‘ನನಗೊಂದು ಉತ್ತಮ ಧರ್ಮಕೇಂದ್ರ ಲಭಿಸಿದೆ, ಇಲ್ಲಿಯ ಜನರು ಪ್ರೀತಿ ವಿಶ್ವಾಸದಿಂದ ಕೂಡಿ, ನನಗೆ ಅತ್ಯಂತ ಆತ್ಮೀತೆಯಿಂದ ಸಹಕರಿಸುತ್ತಾರೆ. ಇಂದು ನನ್ನ ಗುರುದೀಕ್ಷೆಯ 26 ನೇ ವಾರ್ಷಿಕ ಶುಭ ದಿನವನ್ನು ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದಕ್ಕಾಗಿ, ನನ್ನ ಹ್ರದಯ ಸಂತೋಷದಿಂದ ತುಂಬಿ ಬಂದಿದೆ. ನಿಮಗೆಲ್ಲರಿಗೂ ನನ್ನ ಹ್ರದಯಂತರಾಳದ ಕ್ರತ್ಞತೆಗಳು. ನನ್ನ ಮುಂದಿನ ಈ ಸೇವಾವಧಿಯಲ್ಲಿ ವಿಶ್ವಾಸದಿಂದ ಸೇವೆಯನ್ನು ಅರ್ಪಿಸಲು, ದೇವರು ನನಗೆ ಅನುಗ್ರಹಿಸುವಂತೆ, ನನಗಾಗಿ ಪ್ರಾರ್ಥಿಸಿರಿ’ ಎಂದು ಭಿನ್ನವಿಸಿಕೊಂಡರು.
ಈ ಸಂಭ್ರಮದಲ್ಲಿ ಸೈಂಟ್ ಆ್ಯನ್ಸ್ ಕಾನ್ವೆಂಟಿನ ಧರ್ಮಭಗಿನಿಯರು ಪಾಲ್ಗೊಂಡಿದ್ದು, ಭಕ್ತಾಧಿಗಳು ಹೂ ಗುಚ್ಚ ನೀಡಿ ಧರ್ಮಗುರುಗಳಿಗೆ ಶುಭಾಶಯಗಳನ್ನು ಅರ್ಪಿಸಿದರು. ಕಾರ್ಯದರ್ಶಿ ಶ್ರೀಮತಿ ರೇಶ್ಮಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. 20 ಆಯೋಗಗಳ ಸಂಚಾಲಕಿ ಶ್ರೀಮತಿ ಲೀನಾ ತಾವ್ರೊ ಧನ್ಯವಾದಗಳನ್ನು ಅರ್ಪಿಸಿದರು.



















